ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಕ್ರಿಸ್ ಮಸ್, ಹೊಸ ವರ್ಷದ ಗಿಫ್ಟ್; ಬಿಎಂಟಿಸಿ ಪ್ರಯಾಣ ಮತ್ತಷ್ಟು ಅಗ್ಗ

ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಪ್ರಯಾಣಿಕರಿಗೆ ಕ್ರಿಸ್ ಮಸ್, ಹೊಸ ವರ್ಷದ ಉಡುಗೊರೆ ಘೋಷಣೆ ಮಾಡಿದ್ದು, ಬಿಎಂಟಿಸಿ ಬಸ್ ಪ್ರಯಾಣದಲ್ಲಿ ರಿಯಾಯಿತಿ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಪ್ರಯಾಣಿಕರಿಗೆ ಕ್ರಿಸ್ ಮಸ್, ಹೊಸ ವರ್ಷದ ಉಡುಗೊರೆ ಘೋಷಣೆ ಮಾಡಿದ್ದು, ಬಿಎಂಟಿಸಿ ಬಸ್ ಪ್ರಯಾಣದಲ್ಲಿ ರಿಯಾಯಿತಿ ಘೋಷಣೆ ಮಾಡಿದೆ.
ಬಿಎಂಟಿಸಿಯ ವಜ್ರ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಡಿಜಿಟಲ್‌ ಮಾದರಿ ದೈನಿಕ ಪಾಸ್‌ ಖರೀದಿಸಿದಲ್ಲಿ ರೂ,140 ರೂಗಳ ಬಸ್‌ಪಾಸ್ ಗೆ ಶೇ.25ರವರೆಗೆ ರಿಯಾಯಿತಿ ದೊರೆಯಲಿದೆ. ಕ್ರಿಸ್ ಮಸ್‌ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಬಿಎಂಟಿಸಿ ಈ ರಿಯಾಯಿತಿ ಘೋಷಿಸಿದ್ದು, ಜ.1ರ ವರೆಗೂ ಪ್ರಯಾಣಿಕರಿಗೆ ಈ ಕೊಡುಗೆ ಲಭ್ಯವಾಗಲಿದೆ.
ಬಿಎಂಟಿಸಿಯು ಬೆಂಗಳೂರು ಮೂಲದ ಸ್ಟಾರ್ಟ್‌ ಅಪ್‌ ಸೀರೀಸ್‌ 5 ಲ್ಯಾಬ್ಸ್‌ ಕಂಪನಿ ಸಹಯೋಗದಲ್ಲಿ ಇತ್ತೀಚೆಗೆ ‘ನಮ್ಮ ಪಾಸ್‌’ ಯೋಜನೆ ಆರಂಭಿಸಿದೆ. ಡಿಜಿಟೆಲ್‌ ಪಾಸ್‌ಗಾಗಿ ಸೀರೀಸ್‌ 5 ಲ್ಯಾಬ್ಸ್‌ ಕಂಪನಿ ‘ರಿಸರ್ಚ್’ ಆ್ಯಪ್‌ ರೂಪಿಸಿದೆ. ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪ್ರಸ್ತುತ ಕೇವಲ ವಜ್ರ ಬಸ್‌ ದಿನದ ಪಾಸು ಖರೀದಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಆ್ಯಪ್‌ ಮೂಲಕ ಪ್ರಯಾಣಿಕರು ತಮ್ಮ ಹೆಸರು, ಮೊಬೈಲ್‌ ಸಂಖ್ಯೆ, ನಿಗದಿತ ಗುರುತಿನ ಚೀಟಿ(ಆಧಾರ್‌, ಪ್ಯಾನ್‌ಕಾರ್ಡ್‌, ವೋಟರ್‌ ಐಡಿ ಅಥವಾ ಚಾಲನಾ ಪರವಾನಗಿ) ಮತ್ತು ಗುರುತಿನ ಚೀಟಿ ಸಂಖ್ಯೆ ನಮೂದಿಸಿ ಪಾಸ್‌ ಮೊತ್ತ ರೂ.140ಗಳನ್ನು ಆನ್ ಲೈನ್‌ನಲ್ಲೇ ಪಾವತಿಸಬೇಕು. ತಕ್ಷಣದಲ್ಲೇ ಪ್ರಯಾಣಿಕರ ಹೆಸರಿನಲ್ಲಿ ಡಿಜಿಟಲ್‌ ಪಾಸ್‌ ಮುದ್ರಣವಾಗಲಿದೆ.
ಪ್ರತಿ ದಿನ ನಿಗದಿತ ಸಂಖ್ಯೆಯ ರಿಯಾಯಿತಿ ಪಾಸ್‌ಗಳನ್ನು ಆ್ಯಪ್‌ ಮೂಲಕ ಮಾರಾಟ ಮಾಡಲಾಗುವುದು. ಬೆಳಗ್ಗೆ 8ರೊಳಗೆ ಪಾಸ್‌ ಖರೀದಿಸುವವರಿಗೆ ಈ ಕೊಡುಗೆ ಲಭ್ಯವಾಗಲಿದೆ. ಒಮ್ಮೆ ಮುದ್ರಣವಾದ ಡಿಜಿಟಲ್‌ ಪಾಸ್‌ 3.15 ನಿಮಿಷ ಮೊಬೈಲ್‌ ಪರದೆ ಮೇಲೆ ಇರಲಿದೆ. ನಂತರದಲ್ಲಿ ಪ್ರಯಾಣಿಕರು ಮತ್ತೊಮ್ಮೆ ವೆಬ್‌ ಸೈಟ್‌ಗೆ ಭೇಟಿ ನೀಡಿ ‘ಶೋ ಪಾಸ್‌’ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ವೇಳೆ ಮತ್ತೊಮ್ಮೆ ಮೊಬೈಲ್‌ ನಂಬರ್‌ ನಮೂದಿಸಬೇಕು. ಬರುವಂತಹ ಒನ್‌ ಟೈಂ ಪಾಸ್ ವರ್ಡ್‌ ನಮೂದಿಸಿದರೆ ಡಿಜಿಟಲ್‌ ಪಾಸ್‌ ಮತ್ತೆ ಲಭ್ಯವಾಗಲಿದೆ. ಕಾಗದದ ಪಾಸ್‌ ಮಾದರಿಯಲ್ಲೇ ದಿನದಲ್ಲಿ ಮಧ್ಯರಾತ್ರಿ 12 ಗಂಟೆಯವರೆಗೆ ಮಾತ್ರ ಡಿಜಿಟಲ್‌ ಪಾಸ್‌ ಅವಧಿಯಿರಲಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಗಳು ತಿಳಿಸಿದರು.
ಅಲ್ಲದೆ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ ಸೈಟ್ ಭೇಟಿ ನೀಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com