ಹೊಸ ವರ್ಷ ಸಂಭ್ರಮಾಚರಣೆಗೆ 5 ದಿನ ಸಿಎಂ ಕುಮಾರಸ್ವಾಮಿ ಸಿಂಗಾಪುರ ಪ್ರವಾಸ
ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ರಾಜಕೀಯ ಜಂಜಾಟದಿಂದ ಹೊಸ ವರ್ಷದ ಹೊಸ್ತಿಲಿನಲ್ಲಿ ದೂರವಿದ್ದು, ವಿಶ್ರಾಂತಿ ಪಡೆಯುವುದರ ಜೊತೆ ಜೊತೆಗೆ ಹೊಸ ವರ್ಷಾಚರಣೆ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು...
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ರಾಜಕೀಯ ಜಂಜಾಟದಿಂದ ಹೊಸ ವರ್ಷದ ಹೊಸ್ತಿಲಿನಲ್ಲಿ ದೂರವಿದ್ದು, ವಿಶ್ರಾಂತಿ ಪಡೆಯುವುದರ ಜೊತೆ ಜೊತೆಗೆ ಹೊಸ ವರ್ಷಾಚರಣೆ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕುಟುಂಬ ಸಮೇತರಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ವರ್ಷಗಳಿಂದ ಹೊಸ ವರ್ಷದ ಸಂಭ್ರಮವನ್ನು ಕುಮಾರಸ್ವಾಮಿ ಕುಟುಂಬವು ವಿದೇಶದಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದು, ಈ ವರ್ಷವೂ ಸಹ ವಿದೇಶದಲ್ಲಿ ನೂತನ ವರ್ಷವನ್ನು ಬರಮಾಡಿಕೊಳ್ಳಲಿದೆ.
ಈ ಬಾರಿ ಸಿಂಗಾಪುರದಲ್ಲಿ ಕುಮಾರಸ್ವಾಮಿಯವರ ಕುಟುಂಬ ಹೊಸ ವರ್ಷಾಚರಣೆಯ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಅವರೊಂದಿಗೆ ಕುಮಾರಸ್ವಾಮಿಯವರು ಶುಕ್ರವಾರ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆಂದು ತಿಳಿದುಬಂದಿದೆ.
5 ದಿನಗಳ ಕಾಲ ಸಿಂಗಾಪುರದಲ್ಲಿ ಕುಮಾರಸ್ವಾಮಿಯವರು ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಆರೋಗ್ಯಕ್ಕೂ ವಿಶ್ರಾಂತಿ ಅಗತ್ಯವಿರುವ ಹಿನ್ನಲೆಯಲ್ಲಿ ವಿದೇಶ ಪ್ರವಾಸ ಸಹಕಾರಿಯಾಗಲಿದೆ. ಜ.2 ರಂದು ಪ್ರವಾಸ ಅಂತ್ಯಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಗಳಾದ ಬಳಿಕ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ.