ಮೈಸೂರು: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಮತ್ತೊಂದು ಹುಲಿ ಸಾವನ್ನಪ್ಪಿರುವುದಾಗಿ ಮಂಗಳವಾರ ತಿಳಿದುಬಂದಿದೆ.
ಐದು ವರ್ಷದ ಹುಲಿ 2-3 ದಿನಗಳ ಹಿಂದೆ ಸಾವನ್ನಪ್ಪಿದ್ದು, ಮತ್ತೊಂದು ಹುಲಿಯೊಂದಿಗಿನ ಕಾದಾಟದಲ್ಲಿ ಸಾವನ್ನಪ್ಪಿರಬಹುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಮೃತಪಟ್ಟಿರುವ ಹುಲಿಯ ಚರ್ಮ, ಉಗುರುಗಳು ಮತ್ತು ಕೋರೆಹಲ್ಲುಗಳು ಹಾನಿಯಾಗಿದೆ. ಪಶು ವೈದ್ಯರು ಹುಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದು, ಅಂಗಾಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
9 ತಿಂಗಳ ಹಿಂದೆ 6 ಹುಲಿಗಳು ಸಾವನ್ನಪ್ಪಿದ್ದವು. 12 ದಿನಗಳ ಹಿಂದಷ್ಟೇ ಎರಡು ಹುಲಿಗಳು ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಮೃತಪಟ್ಟಿದ್ದವು. ಹುಲಿಗಳ ಸಾವಿಗೆ ಪ್ರಮುಖ ಕಾರಣ ತಿಳಿದುಬಂದಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ನವೆಂಬರ್ ನಿಂದ ಫೆಬ್ರವರಿ ಹುಲಿಗಳು ಒಂದಾಗುವ ಸಮಯವಾಗಿದ್ದು, ಈ ಸಂದರ್ಭದಲ್ಲಿ ಹುಲಿಗಳ ನಡುವೆ ಕಾದಾಟಗಳು ಏರ್ಪಡುವುದು ಸಾಮಾನಾಯವಾಗಿರುತ್ತದೆ. ಒಂದೂವರೆ ತಿಂಗಳ ಹಿಂದೆ ಕೂಡ ಹುಲಿಯೊಂದು ಸಾವನ್ನಪ್ಪಿತ್ತು ಅಧಿಕಾರಿ ಹೇಳಿದ್ದಾರೆ.