

ಬೆಂಗಳೂರು: ಕಾಂಗ್ರೆಸ್ ಎಐಸಿಸಿ ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಸಂಪರ್ಕ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ನಕಲಿ ಫೇಸ್ಬುಕ್ ಖಾತೆ ತೆರೆಯುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ಘಟಕ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.
ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ನೇತೃತ್ವದ ನಿಯೋಗ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ದೂರು ದಾಖಲಿಸಿದೆ.
ನಕಲಿ ಖಾತೆ ತೆರೆಯುವಂತೆ ಪಕ್ಷದ ಕಾರ್ಯಕರ್ತರಿಗೆ ಪ್ರೋತ್ಸಾಹಿಸುವ ಮೂಲಕ ವಂಚಿಸಲಾಗುತ್ತಿದೆ. ಇಂತಹ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ರಾಜಕೀಯ ಪಕ್ಷಗಳ ಮುಖಂಡರು ಇದಕ್ಕೆ ಪೋತ್ಸಾಹಿಸುತ್ತಿರುವುದು ಖಂಡನಾರ್ಹವಾದದ್ದು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಇಂತಹ ಆರೋಪವನ್ನು ರಮ್ಯಾ ಹಾಗೂ ಕಾಂಗ್ರೆಸ್ ಸಾಮಾಜಿಕ ಘಟಕ ನಿರಾಕರಿಸಿದೆ. ಬಿಜೆಪಿಯ ಕಿಡಿಗೇಡಿಗಳು ತಿರುಚಿದ ವಿಡಿಯೋ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸಾಮಾಜಿಕ ಜಾಲ ಘಟಕ ಆರೋಪಿಸಿದೆ.
ಬಿಜೆಪಿಯ ಕಿಡಿಗೇಡಿಗಳು ತಿರುಚಿದ ವಿಡಿಯೋ ಸೃಷ್ಟಿಸುತ್ತಿದ್ದು, ಇದರ ಬಗ್ಗೆ ಬಿಜೆಪಿ ಮಾಹಿತಿ ನೀಡಬೇಕೆಂದು ಕೆಪಿಸಿಸಿ ಸಾಮಾಜಿಕ ಘಟಕದ ಅಧ್ಯಕ್ಷ ಶ್ರೀವಾಸ್ತವ ಒತ್ತಾಯಿಸಿದ್ದಾರೆ.