ಹೈಕೋರ್ಟ್'ಗೆ 5 ಹೊಸ ನ್ಯಾಯಾಮೂರ್ತಿಗಳ ನೇಮಕಕ್ಕೆ ಕೇಂದ್ರ ಸೂಚನೆ: ಉಪವಾಸ ಅಂತ್ಯಗೊಳಿಸಿದ ವಕೀಲರು

ರಾಜ್ಯ ಹೈಕೋರ್ಟ್ ನಲ್ಲಿ ಖಾಲಿಯಿರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಕರ್ನಾಟಕ ವಕೀಲರ ಪರಿಷತ್ ಹಾಗೂ ಬೆಂಗಳೂರು ವಕೀಲರ ಸಂಘ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಸರದಿ ಉಪವಾಹ ಸತ್ಯಾಗ್ರಹವನ್ನು ಗುರುವಾರ ಹಿಂಪಡೆದಿದೆ...
ಹೈಕೋರ್ಟ್
ಹೈಕೋರ್ಟ್
ಬೆಂಗಳೂರು: ರಾಜ್ಯ ಹೈಕೋರ್ಟ್ ನಲ್ಲಿ ಖಾಲಿಯಿರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಕರ್ನಾಟಕ ವಕೀಲರ ಪರಿಷತ್ ಹಾಗೂ ಬೆಂಗಳೂರು ವಕೀಲರ ಸಂಘ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಸರದಿ ಉಪವಾಹ ಸತ್ಯಾಗ್ರಹವನ್ನು ಗುರುವಾರ ಹಿಂಪಡೆದಿದೆ. 
ಹೈಕೋರ್ಟ್'ನಲ್ಲಿ ಖಾಲಿ ಇರುವ ನ್ಯಾಯಾಮೂರ್ತಿ ಹುದ್ದೆಗಳನ್ನು ತುಂಬುವಂತೆ ಆಗ್ರಹಿಸಿ ನಗರದಲ್ಲಿ ಈ ಹೋರಾಟವನ್ನು ನಡೆಸಲಾಗುತ್ತಿತ್ತು. ಆದರೆ, ಈಗ ಕೇಂದ್ರ ಸರ್ಕಾರ 5 ನ್ಯಾಯಮೂರ್ತಿಗಳ ನೇಮಕಕ್ಕೆ ಒಪ್ಪಿಗೆ ಸೂಚಿಸಿರುವ ಹಿನ್ನಲೆಯಲ್ಲಿ ಸರದಿ ಉಪವಾಸ ಸತ್ಯಾಗ್ರಹ ಹಿಂಪಡೆದಿದ್ದೇವೆಂದು ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರು ಹೇಳಿದ್ದಾರೆ. 
ರಾಜ್ಯ ಹೈಕೋರ್ಟ್'ನಲ್ಲಿ ಪ್ರಸ್ತುತ 37 ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಆಗ್ರಹಿಸಿ ಫೆ.5ರಿಂದ ಹೈಕೋರ್ಟ್ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿತ್ತು. ಫೆ.9 ರವರೆಗೆ ಉಪವಾಸ ಸತ್ಯಾಗ್ರಹವನ್ನು ಉದ್ದೇಶಿಸಲಾಗಿತ್ತು. ಆದರೆ, ಐದು ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಮುಂದಾಗಿರುವ ಹಿನ್ನಲೆಯಲ್ಲಿ ಸತ್ಯಾಗ್ರಹ ಹಿಂಪಡೆಯಲಾಗಿದೆ ಎಂದರು. 
ಈ ನಡುವೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಂಡಿರುವ ದಿನೇಶ್ ಮಹೇಶ್ವರಿ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 
ಮೇಘಾಲಯದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹೇಶ್ವರಿ ಅವರನ್ನು ಸಿಜೆ ಆಗಿ ವರ್ಗಾವಣೆ ಮಾಡಿ ರಾಷ್ಟ್ರಪತಿಗಳು ಫೆ.6 ರಂದು ಆದೇಶ ಹೊರಡಿಸಿದ್ದರು. 
ನ್ಯಾಯಮೂರ್ತಿಗಳ ನೇಮಕ ಕುರಿತಂತೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ, ರಂಗನಾಥ್ ಅವರು ಮಂಗಳವಾರಷ್ಟೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ, ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಮನವಿ ಪತ್ರ ಸಲ್ಲಿಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com