
ಬೆಂಗಳೂರು: ರಾಜ್ಯಸರ್ಕಾರದ ಮಹತ್ವಕಾಂಕ್ಷಿ ವಿರಳ ಸಂಚಾರ ದಿನ ಅಭಿಯಾನದ ಮೊದಲ ಆವೃತ್ತಿಗೆ ನಾಳೆ ಚಾಲನೆ ದೊರೆಯಲಿದ್ದು, ರಾಜಧಾನಿ ಬೆಂಗಳೂರು ಸಜ್ಜುಗೊಂಡಿದೆ.
ನಗರದ ರಸ್ತೆಯಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ಅಭಿಯಾನ ಕೈಗೊಂಡಿದ್ದು, ಕಳೆದೊಂದು ತಿಂಗಳಿನಿಂದ ಪ್ರಚಾರ ಮಾಡಲಾಗುತ್ತಿದೆ. ಪ್ರಯಾಣಿಕರು ಕಡಿಮೆ ದರದಲ್ಲಿ ಸಂಚರಿಸಲು ಅನುಕೂಲವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಮೆಟ್ರೋ ರೈಲು ನಿಗಮಗಳು ವ್ಯವಸ್ಥೆ ಮಾಡಿಕೊಂಡಿವೆ.
ಬಿಎಂಟಿಸಿ ದೈನಂದಿನ ಪಾಸಿನ ದರ 65 ಆದರೆ, ನಾಳೆ 5 ರೂ. ರಿಯಾಯಿತಿ ನೀಡಲಾಗುತ್ತಿದೆ. ಬಸ್ಸಿನ ಬೇಡಿಕೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೆಚ್ಚುವರಿ ಬಸ್ಸುಗಳು ಕಾರ್ಯಾಚರಣೆ ನಡೆಸಲಿವೆ. ಇದು ಮೊದಲ ಆವೃತ್ತಿಯಾಗಿದ್ದು, ಹೆಚ್ಚುವರಿ ಬಸ್ಸುಗಳನ್ನು ಓಡಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರ ಸ್ಪಂದನೆ ಗಮನಿಸಿ ಮುಂದಿನ ಆವೃತ್ತಿಗೆ ಮತ್ತಷ್ಟು ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಮೆಟ್ರೋ ರೈಲು ಪ್ರಯಾಣಿಕರು ಸಹ ರಿಯಾಯಿತಿ ದರಲ್ಲಿ ಸಂಚರಿಸಬಹುದಾಗಿದೆ..ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶೇಕಡ 15ರ ಬದಲಿಗೆ ಶೇಕಡಾ 25ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯಂತರದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ರೈಲುಗಳನ್ನು ಓಡಿಸಲಾಗುವುದು ಎಂದು ಅವರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 72 ಲಕ್ಷ ವಾಹನಗಳಿದ್ದು, ಶೇಕಡ.19.4 ರಷ್ಟು ವಾಹನಗಳು ವಾಯುಮಾಲಿನ್ಯ ತಪಾಸಣೆಗೊಳಪಟ್ಟಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.
ತಿಂಗಳಲ್ಲಿ ಒಂದು ದಿನವಾದರೂ ಬೆಂಗಳೂರು ಮಹಾನಗರದಲ್ಲಿ ವಾಹನಗಳ ಸಂಖ್ಯೆ ಕಡಿಮೆ ಮಾಡುವ ಮೂಲಕ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಈ ಅಭಿಯಾನ ಆರಂಭಿಸುತ್ತಿದ್ದು, ಪ್ರಯಾಣಿಕರು ಸ್ಪಂದಿಸಬೇಕಾಗಿದೆ.
Advertisement