ಮಾರ್ಚ್'ನಲ್ಲಿ ಮತ್ತೆ ಪ್ರಧಾನಿ ಮೋದಿ ರಾಜ್ಯಕ್ಕೆ: 3 ನಗರಗಳಿಗೆ ಭೇಟಿ
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ಎಲ್ಲಾ ಜಿಲ್ಲೆಗಳಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕರೆತಂದು ಭಾಷಣ ಮಾಡಿಸಲು ಮುಂದಾಗಿದ್ದು ಇದರಂತೆ ಮುಂದಿನ ತಿಂಗಳು ಮೋದಿಯವರು ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ...
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ಎಲ್ಲಾ ಜಿಲ್ಲೆಗಳಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕರೆತಂದು ಭಾಷಣ ಮಾಡಿಸಲು ಮುಂದಾಗಿದ್ದು ಇದರಂತೆ ಮುಂದಿನ ತಿಂಗಳು ಮೋದಿಯವರು ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.
ದೇಶದಲ್ಲಿಯೇ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಬಾರಿ ತಮ್ಮ ಜನ್ಮದಿನದ ಅಂಗವಾಗಿ ಇದೇ ಫೆ.27ರಂದು ದಾವಣಗೆರೆಯಲ್ಲಿ ರಾಜ್ಯಮಟ್ಟದ ರೈತ ಸಮಾವೇಶವನ್ನು ಆಯೋಜಿಸಿದ್ದಾರೆ. ಈ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದು, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ಐತಿಹಾಸಿಕ ಹಿನ್ನಲೆ ಹೊಂದಿರುವ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ರೈತ ಸಮಾವೇಶದಲ್ಲಿ ರೈತರೊಂದಿಗೆ ಪ್ರಧಾನಿ ಮೋದಿಯವರು ಸಂವಾದ ನಡೆಸಿದ್ದಾರೆ.
ಇದಲ್ಲದೆ, ಫೆ.19ಕ್ಕೆ ಮೈಸೂರು, ಶ್ರವಣಬೆಳಗೊಳಕ್ಕೆ ಭೇಟಿ ನೀಡಲಿದ್ದಾರೆ. ಮೈಸೂರು-ರಾಜಸ್ತಾನ ನಡುವಿನ ಹಂಸಫರ್ ಹಾಗೂ ಮೈಸೂರು-ಬೆಂಗಳೂರು ನಡುವಿನ ಎಲೆಕ್ಟ್ರಿಕ್ ಟ್ರೈನ್'ಗೆ ಹಸಿರು ನಿಶಾನೆ ಸೇರಿದಂತೆ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಲು ಮೋದಿಯವರು ಮೈಸೂರಿಗೆ ಭೇಟಿ ನೀಡಲಿದ್ದಾರೆ.
ಮೈಸೂರು ನಗರದಲ್ಲಿ ನಿರ್ಮಿಸಲಾಗಿರುವ ಇಎಸ್ಐ ಆಸ್ಪತ್ರೆ ಉದ್ಘಾಟನೆ ಮಾಡಲಿರುವ ಮೋದಿಯವರು, ರಸ್ತೆ ದಟ್ಟಣೆ ನಿವಾರಣೆ ಹಿನ್ನಲೆಯಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ನಿರ್ಮಿಸಲು ಉದ್ದೇಶಿಸಿರುವ ಷಟ್ಪಥ ರಸ್ತೆ ಮತ್ತು ಎರಡು ಸರ್ವಿಸ್ ರಸ್ತೆಗಳ ಕಾಮಗಾರಿಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ.
ಬಳಿಕ ವಿಶ್ವವಿಖ್ಯಾತ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ, ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ. ಬಳಿಕ ಮಾರ್ಚ್. 4ರಂದು ವಿಜಯಪುರ ಹಾಗೂ 13ರಂದು ರಾಯಚೂರಿಗೆ ಆಗಮಿಸಲಿದ್ದಾರೆಂದು ತಿಳಿದುಬಂದಿದೆ.