

ತುಮಕೂರು: ದೇವರಾಯನದುರ್ಗದ ಬೆಟ್ಟಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಬೆಂಗಳೂರಿನ ಇಬ್ಬರು ಯುವಕರು ಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಎಲೆರಾಮಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಮೃತರನ್ನು ನಿಖಿಲ್, ಮತ್ತು ಹರೀಶ್ ಎಂದು ಗುರುತಿಸಲಾಗಿದೆ. ಕೆಂಗೇರಿ ಉಪನಗರ ಹಾಗೂ ಮಾಗಡಿ ರಸ್ತೆಯ ನಿವಾಸಿಗಳಾದ ಇವರು ವಿಜಯನಗರದ ವಾಸವಿ ವಿದ್ಯಾಪೀಠದ ವಿದ್ಯಾರ್ಥಿಗಳು ಎಂಬುದು ತಿಳಿದುಬಂದಿದೆ.
ಪ್ರವಾಸಕ್ಕೆಂದು 12 ಮಂದಿ ವಿದ್ಯಾರ್ಥಿಗಳು ದೇವನರಾಯದುರ್ಗಕ್ಕೆ ತೆರಳಿದ್ದು, ಮಾರ್ಗಮಧ್ಯದಲ್ಲಿನ ಎಲೆರಾಮಪುರ ಕೆರೆಯಲ್ಲಿ ಆರು ಮಂದಿ ಈಜಾಡುತ್ತಿರಬೇಕಾದರೆ ಇಬ್ಬರು ಮುಳುಗಿದ್ದಾರೆ. ಉಳಿದ ನಾಲ್ವರು ಈಜಿ ದಡ ಸೇರುವ ಮೂಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇವರು ಯಾರೂ ಕೂಡಾ ಈಜು ಕಲಿತಿರಲಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.