ನಾರಾಯಣಸ್ವಾಮಿ
ರಾಜ್ಯ
ಬಿಬಿಎಂಪಿ ಕಚೇರಿಗೆ ಪೆಟ್ರೋಲ್ ಎರಚಿ, ಧಮ್ಕಿ ಹಾಕಿದ್ದ ನಾರಾಯಣಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ
ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಎರಚಿ, ಧಮ್ಕಿ ಹಾಕಿದ್ದ ಕೆಆರ್ ಪುರಂನ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ...
ಬೆಂಗಳೂರು: ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಎರಚಿ, ಧಮ್ಕಿ ಹಾಕಿದ್ದ ಕೆಆರ್ ಪುರಂನ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಅವರಿಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಕಳೆದ ಫೆಬ್ರವರಿ 16ರಂದು ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಾಕುವುದಾಗಿ ನಾರಾಯಣ ಸ್ವಾಮಿ ಬೆದರಿಕೆ ಹಾಕಿದ್ದರು. ಬಳಿಕ ತಲೆ ಮರೆಸಿಕೊಂಡಿದ್ದ ನಾರಾಯಣಸ್ವಾಮಿ ಇಂದು ರಾಮಮೂರ್ತಿ ನಗರ ಪೊಲೀಸರಿಗೆ ಶರಣಾಗಿದ್ದರು.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಕರಣದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ ನಾರಾಯಣ ಸ್ವಾಮಿ, ಇಂದು ಬೆಳಗ್ಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು.
ನಾರಾಯಣ ಸ್ವಾಮಿ, ಜಮೀನು ಖಾತೆ ಮಾಡಿಕೊಡದಿದ್ದರೆ ಕಚೇರಿಗೆ ಬೆಂಕಿ ಹಚ್ಚುವುದಾಗಿ ಅಲ್ಲಿದ್ದ ಅಧಿಕಾರಿಗಳನ್ನು ಬೆದರಿಸಿದ್ದರು. ಆಪ್ತನ ಕೈಯಲ್ಲಿದ್ದ ಪೆಟ್ರೋಲ್ ಬಾಟಲ್ ಅನ್ನು ಕಿತ್ತುಕೊಂಡು ಕಚೇರಿಯ ಕಡತಗಳಿರುವ ಕವಾಟಿಗೆ ನಾರಾಯಣ ಸ್ವಾಮಿ ಪೆಟ್ರೋಲ್ ಎರಚಿದ್ದರು. ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜ್ ಅವರ ಆಪ್ತರಾಗಿರುವ ಜಲಮಂಡಳಿ ಸದಸ್ಯ ನಾರಾಯಣ ಸ್ವಾಮಿಯ ಗೂಂಡಾಗಿರಿ ವರ್ತನೆಯ ವಿಡಿಯೊ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿತ್ತು.
ನಾರಾಯಣಸ್ವಾಮಿ ಮೇಲೆ ಐಪಿಸಿ ಸೆಕ್ಷನ್ 353,427, 341,504, 506 ಅಡಿ ಕೇಸುಗಳನ್ನು ದಾಖಲಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ