ಮಹಿಳೆಯರ ಪಾಲಿನ ಆತಂಕವಾದಿಯಾಗಿದ್ದ ಸೈಕೋ ಶಂಕರ್ ಮನೋರೋಗಕ್ಕೆ ತುತ್ತಾಗಿದ್ದ

3 ಪ್ರಕರಣಗಳಲ್ಲಿ 27 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ಮಹಿಳೆಯರ ಪಾಲಿನ ಆತಂಕವಾದಿ ಸೈಕೋ ಜೈ ಶಂಕರ್ ಮನೋರೋಗಕ್ಕೆ ತುತ್ತಾಗಿದ್ದ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ...
ಮಹಿಳೆಯರ ಪಾಲಿನ ಆತಂಕವಾದಿಯಾಗಿದ್ದ ಸೈಕೋ ಶಂಕರ್ ಮನೋರೋಗಕ್ಕೆ ತುತ್ತಾಗಿದ್ದ
ಮಹಿಳೆಯರ ಪಾಲಿನ ಆತಂಕವಾದಿಯಾಗಿದ್ದ ಸೈಕೋ ಶಂಕರ್ ಮನೋರೋಗಕ್ಕೆ ತುತ್ತಾಗಿದ್ದ
ಬೆಂಗಳೂರು: 3 ಪ್ರಕರಣಗಳಲ್ಲಿ 27 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ಮಹಿಳೆಯರ ಪಾಲಿನ ಆತಂಕವಾದಿ ಸೈಕೋ ಜೈ ಶಂಕರ್ ಮನೋರೋಗಕ್ಕೆ ತುತ್ತಾಗಿದ್ದ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. 
ಮನೋರೋಗಕ್ಕೆ ಒಳಗಾಗಿದ್ದ ಜೈಶಂಕರನನ್ನು ಜೈಲಿನ ಆಸ್ಪತ್ರೆ ವಿಭಾಗದಲ್ಲಿಟ್ಟು, ಅಧಿಕಾರಿಗಳು ಚಿಕಿತ್ಸೆಗೆ ವ್ಯವಸ್ಥೆಯನ್ನು ಕಲ್ಪಿಸಿದ್ದರು. 2013ರ ಆಗಸ್ಟ್ 31ರ ರಾತ್ರಿ ಕಾರಾಗೃಹದ ಗೋಡೆ ಜಿಗಿದು ಪರಾರಿಯಾಗಿದ್ದ ಆತ, ಹಲವು ದಿನಗಳ ಬಳಿಕ ಜೈಲನಿಂದ ಎರಡೂವರೆ ಕಿ.ಮೀ ದೂರದಲ್ಲೇ ಇರುವ ಕೂಡ್ಲು ಪ್ರದೇಶದ ಗುಡಿಸಲೊಂದರಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. 
ಅಂದು 30 ಎತ್ತರಡ ಜೈಲಿನ ಗೋಡೆಯಿಂದ ಹಾರಿದ ಪರಿಣಾಮ ಆತನ ಕಾಲು ಹಾಗೂ ದೇಹದ ಕೆಲ ಭಾಗದ ಮೂಳೆಗಳು ಪುಡಿಯಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕವೂ ಆತ ಸಂಪೂರ್ಣವಾಗಿ ಗುಣಮುಖನಾಗಿರಲಿಲ್ಲ. ಹೀಗಾಗಿ ಅಂದಿನಿಂದ ಜೈಶಂಕರ ಗಾಲಿ ಕುರ್ಚಿಯ ಆಸರೆ ಪಡೆದಿದ್ದ. ಸರಿಯಾಗಿ ನಡೆಯಲು ಸಾಧ್ಯವಾಗದೇ ಇದ್ದ ಕಾರಣ ಜೈಶಂಕರನನ್ನು ಕಾರಾಗೃಹದಲ್ಲಿ ಪ್ರತ್ಯೇಕ ಬಿದಿ ಭದ್ರತೆಯ ಸೆಲ್ ನಲ್ಲಿಡಲಾಗಿತ್ತು. ಆ ಸೆಲ್ ನಲ್ಲಿಯೇ ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ತನ್ನ ಕೆಲಸವನ್ನು ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಮತ್ತೊಬ್ಬ ಕೈದಿಯನ್ನು ಈತನ ಸಹಾಯಕ್ಕೆ ಅಧಿಕಾರಿಗಳು ಇಟ್ಟಿದ್ದರು. ಇದಲ್ಲದೆ, ಹಲವು ಪ್ರಕರಣಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈತನನ್ನು ಅಪರಾಧಿಯೆಂದು ತಿಳಿಸಿ ಶಿಕ್ಷೆಯನ್ನು ಪ್ರಕಟಿಸಿತ್ತು. ಈ ಎಲ್ಲಾ ಬೆಳವಣಿಗೆಗಳು ಆತ ಮಾನಸಿಕ ರೋಗಕ್ಕೆ ತುತ್ತಾಗುವಂತೆ ಮಾಡಿತ್ತು. ಕೆಲ ದಿನಗಳ ಹಿಂದೆಷ್ಟೇ ನ್ಯಾಯಾಲಯದ ಆದೇಶದ ಮೇರೆಗೆ ಅಧಿಕಾರಿಗಳು ಈತನಿಗೆ ಕೌನ್ಸಿಲಿಂಗ್ ಕೂಡ ಕೊಡಿಸಲಾಗಿತ್ತು. ಆದರೂ ಇದು ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಜೈಲು ಮೂಲಗಳು ಮಾಹಿತಿ ನೀಡಿವೆ. 
ಬಂಧನಕ್ಕೊಳಗಾದಾಗ ಸೈಕೋ ಶಂಕರ್ ಜೈಲು ಸಿಬ್ಬಂದಿಗಳ ನಂಬಿಕೆಯನ್ನು ಗೆದ್ದಿದ್ದ. ಈತನ ಮೇಲೆ ನಂಬಿಕೆಯಿಟ್ಟಿದ್ದ ಸಿಬ್ಬಂದಿ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಜೈಲಿನ ಬಾಗಿಲು ಹಾಕುವ ಕೆಲಸವನ್ನೂ ಹೇಳಿದ್ದರು. ಅಷ್ಟರ ಮಟ್ಟಿಗೆ ನಂಬಿಕೆಯನ್ನು ಗಳಿಸಿದ್ದ. ಜೈಲಿನಿಂದ ತಪ್ಪಿಸಿಕೊಳ್ಳುವುದಕ್ಕೂ ಮುನ್ನ, ಒಂದು ದಿನ ಗಂಟೆಗಳ ಕಾಲ ಆತ ಕಾಣಿಸಿರಲಿಲ್ಲ. ಬಳಿಕ ಜೈಲು ಸಿಬ್ಬಂದಿಗಳು ತೀವ್ರವಾಗಿ ಹುಡುಕಾಟ ಆರಂಭಿಸಿದ್ದರು. ಈವೇಳೆ ಜೈಲಿನ ಆಸ್ಪತ್ರೆ ವಿಭಾಗದ ಉದ್ಯಾನವನದಲ್ಲಿ ಕಾಣಿಸಿದ್ದ. ಈ ವೇಳೆ ಹಸಿವಾಗಿದ್ದರಿಂದ ಹಣ್ಣನ್ನು ಕಿತ್ತುಕೊಳ್ಳಲು ಬಂದಿದ್ದೆ ಎಂದು ಹೇಳಿದ್ದ. ಇದಾದ ಕೆಲವೇ ದಿನಗಳ ಬಳಿಕ ಈತ ತಪ್ಪಿಸಿಕೊಂಡಿದ್ದ ಎಂದು ಮೂಲಗಳು ನೀಡಿವೆ. 
ಜೈಲಿನಿಂದ ತಪ್ಪಿಸಿಕೊಂಡ ಸೈಕೋ ಶಂಕರ್ ನನ್ನು ಮತ್ತೆ ಬಂಧನಕ್ಕೊಳಪಡಿಸುವ ವೇಳೆ ಆತನ ಬೆನ್ನಿನ ಮೂಳೆ ಮುರಿದಿತ್ತು. ತನಿಖೆ ಹಿನ್ನಲೆಯಲ್ಲಿ ಆತನನ್ನು ಹಲವು ಪ್ರದೇಶಗಳಿಗೂ ಕರೆದೊಯ್ಯಲಾಗಿತ್ತು. ವಿಚಾರಣೆ ವೇಳೆ ಜೈಲಿನಿಂದ ಏಕೆ ತಪ್ಪಿಸಿಕೊಂಡೆ ಎಂದು ಪ್ರಶ್ನಿಸಿದಾಗ, ಜೈಲಿನಿಂದ ನಾನು ಮತ್ತೆ ಹೊರ ಬರುವ ಎಲ್ಲಾ ವಿಶ್ವಾಸಗಳೂ ಹೋಗಿತ್ತು ಎಂದಿದ್ದ. ಸೈಕೋ ಜೈಶಂಕರ್ ಗೆ ಸಹೋದರನೊಬ್ಬನಿದ್ದು, ಆತನ ಲಾರಿ ಚಾಲಕನಾಗಿದ್ದಾನೆ. ಆತನ ಸಹಾಯದೊಂದಿಗೆ ಹರಿಯಾಣ ರಾಜ್ಯಕ್ಕೆ ಹೋಗಿ, ಅಲ್ಲಿ ತನ್ನ ಕುಟುಂಬಸ್ಥರನ್ನು ಸ್ಥಳೀಂತರಿಸಿ, ಅಲ್ಲಿಯೇ ಕೆಲಸವನ್ನು ಮಾಡಿಕೊಂಡು ಸಂಸಾರ ನಡೆಸಲು ಯೋಜಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಮಂಗಳವಾರ ಮಧ್ಯರಾತ್ರಿ 2.15ರ ಸುಮಾರಿಗೆ ಸೆಲ್ ನಲ್ಲಿ ಜೈಶಂಕರ ಬ್ಲೇಡ್ ನಿಂದ ಕತ್ತು ಕೊಯ್ಡುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ರಾತ್ರಿ ಪಾಳಿಯ ಸಿಬ್ಬಂದಿ, ಸೆಲ್ ಗಳ ಪರಿಶೀಲನೆಗೆ ತೆರಳಿದಾಗ ರಕ್ತದ ಮಡುವಿನಲ್ಲಿ ಆತನನಮ್ನು ಕಂಡಿದ್ದಾನೆ. ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಿಬ್ಬಂದಿ, ಜೈಶಂಕರ್ ನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾನೆ. 
ತಮಿಳುನಾಡಿನ ಈಡಪ್ಪಾಡಿ ತಾಲ್ಲೂಕು ಕಟ್ಟುವಾಳ್ ಕನ್ನಿಯಾಪಟ್ಟಿ ಗ್ರಾಮದ ಜೈ ಶಂಕರ್, ವೃತ್ತಿಯಲ್ಲಿ ಚಾಲಕನಾಗಿದ್ದ. ಬಳಿಕ ತನ್ನ ಸಂಬಂಧಿಕ ಯುವತಿ ಜೊತೆಗೆ ವಿವಾಹವಾಗಿದ್ದ. ಆತನಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದಿಂದ ಪತ್ನಿಯಿಂದ ಪ್ರತ್ಯೇಕವಾದ ಬಳಿಕ ಆವನ ಬದುಕು ದುಸ್ತರವಾಗಿತ್ತು. ತನ್ನನ್ನು ತಿರಸ್ಕರಿಸಿದ್ದ ಪತ್ನಿ ಮೇಲೆ ಆತನ ದ್ವೇಷಾಗ್ನಿಗೆ ಹಲವು ಮಹಿಳೆಯರು ಬಲಿಯಾಗಿದ್ದು ಮಾತ್ರ ದುರಂತವೇ ಸರಿ. 2009-11ರಲ್ಲಿ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ಮಹಿಳೆಯರ ಪಾಲಿಗೆ ಸೈಕೋ ಜೈಶಂಕರ್ ಆತಂಕವಾದಿಯಾಗಿ ಪರಿಣಮಿಸಿದ್ದ. 
ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಪಾತಕ ಕೃತ್ಯ ಎಸಗುತ್ತಿದ್ದ ಶಂಕರ, ತನ್ನ ಬಲೆಗೆ ಬಿದ್ದ ಮಹಿಳೆಯರ ಮೇಲಿನ ಕ್ರೌರ್ಯ ಹೇಳತೀರದಾಗಿತ್ತು. 2009ರ ಜುಲೈ3 ರಂದು ಹೊಸೂರಿನ ಪರಂಡಹಳ್ಳಿಯಲ್ಲಿ 45 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಂದಿದ್ದ, ಇದು ಜೈಶಂಕರನ ರಕ್ತಚರಿತ್ರೆಯ ಮೊದಲ ಅಧ್ಯಾಯವಾಗಿತ್ತು. 
ಪೆರಂಡಹಳ್ಳಿ ಘಟನೆ ನಡೆದ ಒಂದೂವರೆ ತಿಂಗಳುಗಳಲ್ಲಿ ಕಂಗೆಯಂ ಠಾಣೆಯ ಕರ್ತವ್ಯನಿರತ ಮಹಿಳಾ ಪೇದೆ ಅಪಹರಿಸಿ ಲೈಂಗಿಕವಾಗಿ ಹಿಂಸಿಸಿ ಹತ್ಯೆಗೈದಿದ್ದ. ಅಂದಿನ ತಮಿಳುನಾಡಿನ ಉಪಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಪೆರುಮನಲ್ಲೂರಿಗೆ ಭೇಟಿ ನೀಡಿದ್ದರು. ಈ ಹಿನ್ನಲೆಯಲ್ಲಿ ಬಂದೋಬಸ್ತ್ ಗೆ ಪೇದೆ ನಿಯೋಜನೆಗೊಂಡಿದ್ದರು. ಅಲ್ಲಿಂದಲೇ ಮಹಿಳಾ ಪೇದೆಯನ್ನು ಅಪಹರಿಸಿದ್ದ.
ಮಹಿಳೆಯರ ಸರಣಿ ಕೊಲೆಗಳಿಂದ ತಮಿಳುನಾಡಿನ ಕೆಲ ಭಾಗದ ನಾಗರೀಕರಿಗೆ ಸೈಕೋ ಕಿಲ್ಲರ್ ಭಯ ಸೃಷ್ಟಿಯಾಗಿತ್ತು. ಕೊನೆಗೆ 2009ರ ಆ.9ರಂದು ಮೊದಲ ಬಾರಿಗೆ ಶಂಕರನನ್ನು ಬಂಧನಕ್ಕೊಳಪಡಿಸುವಲ್ಲಿ ತಿರುಪೂರ್ ಪೊಲೀಸರ ತಂಡ ಯಶಸ್ಸು ಕಂಡಿತ್ತು. ಅಷ್ಟರಲ್ಲೇ 13 ಕಡೆ ಅಪರಾಧ ಕೃತ್ಯಗಳನ್ನು ಶಂಕರ ಎಸಗಿದ್ದ. 
ಬಳಿಕ ಕೊಯಮತ್ತೂರು ಸೆಂಟ್ರಲ್ ನಲ್ಲಿದ್ದ ಶಂಕರ್ ನನ್ನು 2011ರ ಮಾ.18ರಂದು ಸೇಲಂ ನ್ಯಾಯಾಲಯಕ್ಕೆ ಪೊಲೀಸರು ಕರೆದೊಯ್ದಿದ್ದರು. ಆಗ ಬೆಂಗಾವಲು ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ಸೇಲಂ ಬಸ್ ನಿಲ್ದಾಣದಿಂದ ತಪ್ಪಿಸಿಕೊಂಡಿದ್ದ. ಜೈಶಂಕರ್ ನನ್ನು ಕರೆದೊಯ್ಯಿತ್ತಿದ್ದ ಎಂ. ಚಿನ್ನಸ್ವಾಮಿ ಎಂಬುವವರು ತನಿಖೆಗೆ ಹೆದರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 
ಸೇಲಂನಿಂದ ಲಾರಿ ಹತ್ತಿ ಕರ್ನಾಟಕ ರಾಜ್ಯಕ್ಕೆ ಆಗಮಿಸಿದ್ದ ಜೈಶಂಕರ, ಒಂದೂವರೆ ತಿಂಗಳು ಅವಧಿಯಲ್ಲೇ ಚಿತ್ರದುರ್ಗ, ತುಮಕೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಐವರು ಮಹಿಳೆಯರ ಮೇಲೆ ಘೋರ ಕೃತ್ಯಗಳನ್ನು ಎಸಗಿದ್ದ. 
ಅದರಲ್ಲೂ ಚಿತ್ರದುರ್ಗದಲ್ಲಿ ಗಂಡನ ಎದುರೇ ಪತ್ನಿಯೇ ಮೇಲೆ ಅತ್ಯಾಚಾರ ನಡೆಸಿ ಕ್ರೌರ್ಯ ಮೆರೆದಿದ್ದ. 2011ರ ಮೇ. 5 ರಂದು ವಿಜಯಪುರದ ಏಳಗಿ ಗ್ರಾಮಕ್ಕೆ ಹೋಗಿದ್ದ ಜೈಶಂಕರ, ಅಲ್ಲಿ ಗದ್ದೆಯಲ್ಲಿ ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದ ಚಂದ್ರಕಲಾ ಎಂಬುವವರ ಮೇಲೆ ಎರಗಿದ್ದ. ಆದರೆ, ಆ ವೇಳೆ ಆಕೆ ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ್ದ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು, ಶಂಕರನನ್ನು ಹಿಡಿದು ಮನಬಂದಂತೆ ಥಳಿಸಿದ್ದರು. ಆಗ ಆತನನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾ ಆತನ ಇತಿಹಾಸ ಕೇಳಿ ಬೇಸ್ತು ಬಿದ್ದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com