ವಿದ್ಯುತ್ ಸಂಪರ್ಕ ಸಮಸ್ಯೆ: ಹಠಾತ್ ಸ್ಥಗಿತಗೊಂಡ ಮೆಟ್ರೋ ಸಂಚಾರ, ಕೆಲ ನಿಮಿಷ ಕಂಗಾಲಾದ ಪ್ರಯಾಣಿಕರು

ವಿದ್ಯುತ್ ಸಂಪರ್ಕದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಂಗಳವಾರ ಸಂಜೆ 6 ಗಂಟೆಗೆ 6 ನಿಮಿಷಗಳ ಕಾಲ ನಮ್ಮ ಮೆಟ್ರೋದ ಎಲ್ಲಾ ಮಾರ್ಗಗಳ ರೈಲು ಸಂಚಾರ ಹಠಾತ್ ಸ್ಥಗಿತಗೊಂಡ ಪರಿಣಾಮ ಸಾವಿರಾರು ಪ್ರಯಾಣಿಕರು ಕಂಗಾಲಾಗುವಂತಾಗಿತ್ತು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವಿದ್ಯುತ್ ಸಂಪರ್ಕದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಂಗಳವಾರ ಸಂಜೆ 6 ಗಂಟೆಗೆ 6 ನಿಮಿಷಗಳ ಕಾಲ ನಮ್ಮ ಮೆಟ್ರೋದ ಎಲ್ಲಾ ಮಾರ್ಗಗಳ ರೈಲು ಸಂಚಾರ ಹಠಾತ್ ಸ್ಥಗಿತಗೊಂಡ ಪರಿಣಾಮ ಸಾವಿರಾರು ಪ್ರಯಾಣಿಕರು ಕಂಗಾಲಾಗುವಂತಾಗಿತ್ತು. 
ಬೈಯ್ಯಪ್ಪನಹಳ್ಳಿ-ಮೈಸೂರು ಹಾಗೂ ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ರೈಲುಗಳು ಹಠಾತ್ ಆಗಿ ಸ್ಥಗಿತಗೊಂಡಿದ್ದವು. ಬಿಎಂಆರ್'ಸಿಎಲ್ ತಾಂತ್ರಿಕ ಸಿಬ್ಬಂದಿ ಕೂಡಲೇ ಸರಿಪಡಿಸಿ ಸುಮಗ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟದು. ಈ ಸಂದರ್ಭದಲ್ಲಿ ರೈಲಿನ ಬಾಗಿಲು ತೆರಯಲು ಸಾಧ್ಯವಾಗದೆ ಹವಾನಿಯಂತ್ರಿತ ವ್ಯವಸ್ಥೆ ಕಾರ್ಯನಿರ್ವಹಿಸದ ಪರಿಣಾಮ ಪ್ರಯಾಣಿಕರು ಆತಂಕಕ್ಕೆ ಒಳಗಾಗುವಂತಾಗಿತ್ತು. 
ಕೆಲವರು ಉಸಿರಾಟ ಸಮಸ್ಯೆಗೆ ಒಳಗಾಗಿದ್ದರು. ಜನದಟ್ಟಣೆ ಅವಧಿಯಲ್ಲಿ ಈ ರೀತಿಯ ಸಮಸ್ಯೆ ಎದುರಾಗಿದ್ದರಿಂದಾಗಿ ಪ್ರಯಾಣಿದರು ಬೋಗಿಯೊಳಗೇ ಬೆವರು ಹರಿಸುವಂತಾಗಿತ್ತು. ಕೆಲವೆಡೆ ಸಿಬ್ಬಂದಿ ಹಾಗೂ ಪ್ರಯಾಣಿಕರೊಂದಿಗೆ ವಾಗ್ವಾದಗಳೂ ನಡೆದಿದ್ದವು. ಈ ನಡುವೆಯೇ ಯಾವುದೇ ಸೂಚನೆ ನೀಡದ ಮೆಟ್ರೋ ಏಕಾಏಕಿ ಚಲಿಸಲು ಆರಂಭಿಸಿತ್ತು ಎಂದು ವರದಿಗಳು ತಿಳಿಸಿವೆ. 
ಬೆಳಿಗ್ಗೆ ಕೂಡ ರೈಲಿನಲ್ಲಿ ವಿದ್ಯುತ್ ಸಂಪರ್ಕದ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ಸೆಂಟ್ರಲ್ ಕಾಲೇಜು ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣದ ನಡುವೆ 30 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು. ಬೆಳಿಗ್ಗೆ ರೈಲು 9.30ಕ್ಕೆ ಸೆಂಟ್ರಲ್ ಕಾಲೇಜು ಬಿಟ್ಟು ಮುಂದೆ ಹೋಗುತ್ತಿದ್ದಂತೆಯೇ 10.02ಕ್ಕೆ ಸ್ಥಗಿತಗೊಂಡಿದೆ. ಬಳಿಕ ಸುಮಾರು 10.28ರವರೆಗೂ ರೈಲಿನ ದ್ವಾರಗಳು ತೆಗೆಯಲು ಸಾಧ್ಯವಾಗಿಲ್ಲ. ಜೊತೆಗೆ ರೈಲಿನಲ್ಲಿದ್ದ ಹವಾನಿಯಂತ್ರಿತ ವ್ಯವಸ್ಥೆ ಕೂಡ ಸ್ಥಗಿತಗೊಂಡಿತ್ತು. ಈ ವೇಳೆ ಕೆಲವರಿಗೆ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಂಡಿತ್ತು ಎಂಬ ದೂರುಗಳು ಕೇಳಿಬರತೊಡಗಿವೆ. 
ಬೆಳಿಗ್ಗೆ 10.28ರ ಸುಮಾರಿಗೆ ಸಮಸ್ಯೆ ಎದುರಾಗಿತ್ತು. 11 ಗಂಟೆಯಷ್ಟರಲ್ಲಿ ಎಲ್ಲಾ ಸಮಸ್ಯೆಗಳೂ ಪರಿಹಾರಗೊಂಡಿದ್ದವು. ಇನ್ನ ಸಂಜೆ 6.20 ಸುಮಾರಿಗೆ ಕಾಣಿಸಿಕೊಂಡಿದ್ದ ಸಮಸ್ಯೆ 6.26ಕ್ಕೆ ಪರಿಹಾರಗೊಂಡಿತ್ತು ಎಂದು ಬಿಎಂಆರ್'ಸಿಎಲ್ ಸಾರ್ವಜನಿಕ ಸಂಪರ್ಕದ ಮುಖ್ಯ ಅಧಿಕಾರಿ ಹೇಳಿದ್ದಾರೆ. 
ರೈಲುಗಳು ಅಂತರ್ ನಿರ್ಮಿತ ವೇಗವನ್ನು ಹೊಂದಿದ್ದು, ವಿದ್ಯುತ್ ಸಮಸ್ಯೆ ಎದುರಾದಾಗ ಸ್ಥಳೀಯ ಮೆಟ್ರೋ ನಿಲ್ದಾಣಕ್ಕೆ ತಲುಪುತ್ತವೆ. ನಿಲ್ದಾಣ ತಲುಪುತ್ತಿದ್ದಂತೆಯೇ ಬಾಗಿಲುಗಳು ಸ್ವಯಂಚಾಲಿತವಾಗಿಯೇ ತೆರೆದುಕೊಳ್ಳುತ್ತವೆ ಎಂದು ಬಿಎಂಆರ್'ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com