ಪ್ರಯಾಣಿಕನ ಮೇಲೆ ಆಸಿಡ್ ಬಿದ್ದು ಗಾಯವಾಗಿದ್ದಕ್ಕೆ ಕೆಎಸ್ಆರ್ ಟಿಸಿಗೆ 10 ಸಾವಿರ ರೂ. ದಂಡ

ಬಸ್ಸುಗಳಲ್ಲಿ ಯಾವುದೇ ಅಸುರಕ್ಷಿತ ವಸ್ತುಗಳನ್ನು ಒಯ್ಯಬಾರದು ಎಂದು ಪರಿಶೀಲಿಸುವುದು ಬಸ್ಸಿನ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಬಸ್ಸುಗಳಲ್ಲಿ ಯಾವುದೇ ಅಸುರಕ್ಷಿತ ವಸ್ತುಗಳನ್ನು ಒಯ್ಯಬಾರದು ಎಂದು ಪರಿಶೀಲಿಸುವುದು ಬಸ್ಸಿನ ನಿರ್ವಾಹಕನ ಕೆಲಸವಾಗಿದೆ ಎಂದು ನಗರದ ಗ್ರಾಹಕ ವೇದಿಕೆ ಇತ್ತೀಚೆಗೆ ಕಾನೂನು ಹೊರಡಿಸಿದೆ.
ಬಸ್ಸಿನ ನಿರ್ವಾಹಕನ ನಿರ್ಲಕ್ಷ್ಯತನದಿಂದಾಗಿ ಪ್ರಯಾಣಿಕನಿಗೆ ಪರಿಹಾರ ನೀಡಬೇಕಾದ ಪರಿಸ್ಥಿತಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಬಂದಿದೆ.
ಸಹಕಾರನಗರದ ನಿವಾಸಿ ಡಾ.ವೈ.ವೆಂಕಟರಮಣಪ್ಪ ಅವರಿಗೆ ವ್ಯಾಜ್ಯ ವೆಚ್ಚ 1,000 ರೂಪಾಯಿ ಮತ್ತು 10,000 ರೂಪಾಯಿ ಪರಿಹಾರ ನೀಡುವಂತೆ ಕೆಎಸ್ಆರ್ ಟಿಸಿಗೆ ಬೆಂಗಳೂರು ಗ್ರಾಮೀಣ ಮತ್ತು ನಗರ ಮೊದಲ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಅನ್ಸರ್ ಖಲೀಮ್ ಮತ್ತು ಸದಸ್ಯ ಭಾರತಿ ಬಿ.ವಿಬುಟೆ ಆದೇಶ ನೀಡಿದ್ದಾರೆ.
ಆದ ಘಟನೆಯಿಷ್ಟು:2014ರ ಏಪ್ರಿಲ್ ನಲ್ಲಿ ತಮ್ಮ ಪುತ್ರನ ಹುಟ್ಟುಹಬ್ಬ ಆಚರಿಸಲು ಡಾ.ವೆಂಕಟರಮಣಪ್ಪ ಮತ್ತವರ ಕುಟುಂಬ ಬೆಂಗಳೂರಿನಿಂದ ತಿಪಟೂರು ತಾಲ್ಲೂಕಿನ ದಾಸರಿಘಟ್ಟದ ಚೌಡೇಶ್ವರಿ ದೇವಸ್ಥಾನಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಕೆ.ಬಿ.ಕ್ರಾಸ್ ನಲ್ಲಿ ಊಟಕ್ಕೆ ಬಸ್ಸು ನಿಲ್ಲಿಸಿದಾಗ ಲಗ್ಗೇಜು ಇಡುವ ಸ್ಥಳದಲ್ಲಿಟ್ಟಿದ್ದ ನೀರಿನ ಬಾಟಲ್ ನ್ನು ವೆಂಕಟರಮಣಪ್ಪ ತೆಗೆಯಲು ಪ್ರಯತ್ನಿಸಿದರು. ಆದರೆ ಇನ್ನೊಂದು ಬ್ಯಾಗ್ ನಲ್ಲಿಟ್ಟಿದ್ದ ಮತ್ತೊಂದು ದ್ರವ ಪದಾರ್ಥ ಅವರ ಮೇಲೆ ಬಿತ್ತು. ಹೊಟೇಲ್ ನಲ್ಲಿ ಕೈಯನ್ನು ತೊಳೆದುಕೊಂಡರೂ ಚರ್ಮ ತುರಿಕೆಯಾಗಲು ಆರಂಭವಾಯಿತು.
ನಂತರ ಅವರಿಗೆ ಗೊತ್ತಾಯಿತು. ತಮ್ಮ ಮೈ ಮೇಲೆ ಬಿದ್ದ ದ್ರವ ಪದಾರ್ಥ ಸಲ್ಫರಿಕ್ ಆಸಿಡ್ ಆಗಿದ್ದು ಮತ್ತೊಬ್ಬ ಪ್ರಯಾಣಿಕ ಅದನ್ನು ಒಯ್ಯುತ್ತಿದ್ದರು. ಆಸಿಡ್ ಇವರ ಮೈ ಮತ್ತು ಬಟ್ಟೆ ಮೇಲೆ ಬಿದ್ದು ತೊಂದರೆಯಾಗಿತ್ತು. ಈ ವಿಷಯವನ್ನು ವೆಂಕಟರಮಣಪ್ಪ ಕೆಎಸ್ ಆರ್ ಟಿಸಿ ಗಮನಕ್ಕೆ ತಂದು  3ಲಕ್ಷ ರೂಪಾಯಿ ಪರಿಹಾರ ಕೋರಿದರು. ಆದರೆ ಅವರ ಮನವಿಯನ್ನು ಕೆಎಸ್ಆರ್ ಟಿಸಿ ಅಧಿಕಾರಿಗಳು ಕೇಳಲಿಲ್ಲ. ಅದಕ್ಕಾಗಿ ಅವರು ಫೆಬ್ರವರಿ 2016ರಲ್ಲಿ ಗ್ರಾಹಕ ವೇದಿಕೆಯ ಮೊರೆ ಹೋದರು.
ದೂರುದಾರರು ಯಾವುದೇ ಪೊಲೀಸ್ ದೂರು ನೀಡಿರಲಿಲ್ಲ ಅಥವಾ ಸಾಕ್ಷಿಗಳನ್ನು ಒದಗಿಸಲಿಲ್ಲ. ಘಟನೆ ನಡೆದು 20 ತಿಂಗಳು ಕಳೆದು ದೂರು ನೀಡಿದ್ದು ಅದನ್ನು ಮಾನ್ಯ ಮಾಡಬಾರದೆಂದು ಕೆಎಸ್ಆರ್ ಟಿಸಿ ವಾದಿಸಿತ್ತು. ಆದರೆ ವೆಂಕಟರಮಣಪ್ಪನವರು ಫೋಟೋ ಸಮೇತ ಅಫಿಡವಿಟ್ಟು ಸಲ್ಲಿಸಿದರು. ಆಸಿಡ್ ನಿಂದ ತಮ್ಮ ಕೈ, ಬಟ್ಟೆಗಳಿಗೆ ಆದ ಗಾಯಗಳನ್ನು ಕೂಡ ಫೋಟೋ ಸಮೇತ ತೋರಿಸಿದರು.
ಇದು ಕೆಎಸ್ಆರ್ ಟಿಸಿ ಬಸ್ಸಿನ ನಿರ್ವಾಹಕರ ಕಡೆಯಿಂದ ಆದ ನಿರ್ಲಕ್ಷ್ಯವಾಗಿದ್ದು ಪ್ರಯಾಣಿಕರು ಆಸಿಡ್ ನಂತಹ ಅಪಾಯಕಾರಿ ವಸ್ತುಗಳನ್ನು ಬಸ್ಸಿನಲ್ಲಿ ಕೊಂಡೊಯ್ಯಲು ಅವಕಾಶ ನೀಡಬಾರದು. ಇದರಿಂದ ಬೇರೆ ಪ್ರಯಾಣಿಕರಿಗೆ ಅಪಾಯವಿರುತ್ತದೆ. ಇದಕ್ಕೆ ದೂರುದಾರರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವ ಅಗತ್ಯವಿಲ್ಲ ಎಂದು ಗ್ರಾಹಕ ವ್ಯಾಜ್ಯಗಳ ವೇದಿಕೆ ಹೇಳಿ ದಂಡ ಪಾವತಿಸುವಂತೆ ಆದೇಶ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com