ಮಂಗಳೂರು ಜೈಲಲ್ಲಿ ಕೈದಿಗಳ ಮಾರಾಮಾರಿ: 15ಕ್ಕೂ ಹೆಚ್ಚು ಕೈದಿಗಳಿಗೆ ಗಾಯ

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ 15ಕ್ಕೂ ಹೆಚ್ಚು ಕೈದಿಗಳು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ...
ಮಂಗಳೂರು ಜಿಲ್ಲಾ ಕಾರಾಗೃಹ (ಸಂಗ್ರಹ ಚಿತ್ರ)
ಮಂಗಳೂರು ಜಿಲ್ಲಾ ಕಾರಾಗೃಹ (ಸಂಗ್ರಹ ಚಿತ್ರ)
ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ 15ಕ್ಕೂ ಹೆಚ್ಚು ಕೈದಿಗಳು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ. 
ಜೈಲಿನಲ್ಲಿ ಎ ಮತ್ತು ಬಿ ಬ್ಲಾಕ್ ಗಳಿದ್ದು, ಎ ಬ್ಲಾಕ್ ನಲ್ಲಿ ಒಂದು ಧರ್ಕ್ಕೆ ಸೇರಿದ ಕೈದಿಗಳನ್ನು ಹಾಗೂ ಬಿ ಬ್ಲಾಕ್ ನಲ್ಲಿ ಮತ್ತೊಂದು ಧರ್ಮಕ್ಕೆ ಸೇರಿದ್ದ ಕೈದಿಗಳನ್ನು ಇರಿಸಲಾಗಿತ್ತು. 
ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಸಂದರ್ಶನ ಸಂದರ್ಭದಲ್ಲಿ ಭಿನ್ನ ಧರ್ಮಕ್ಕೆ ಸೇರಿದ್ದ ಇಬ್ಬರು ಕೈದಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ, ಇದು ತೀವ್ರ ಹೊಡೆದಾಟಕ್ಕೆ ಕಾರಣವಾಗಿದೆ. 
ಸ್ಥಳದಲ್ಲಿದ್ದ ನೂರಕ್ಕೂ ಅಧಿಕ ಕೈದಿಗಳು ಕೈಗೆ ಸಿಕ್ಕಿದ ವಸ್ತುಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ 15ಕ್ಕೂ ಅಧಿಕ ಕೈದಿಗಳು ಗಾಯಗೊಂಡಿದ್ದಾರೆ. ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ 100ಕ್ಕೂ ಹೆಚ್ಚು ಪೊಲೀಸರು ಕ್ಷಿಪ್ರ ಲಾಠಿ ಚಾರ್ಜ್ ನಡೆಸಿದ್ದಾರೆ. ಈ ವೇಳೆ 3 ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ. 
ಘಙಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಕೈದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. 
ಈ ಹಿಂದೆ ಕೂಡ ಮಂಗಳೂರು ಜೈಲಿನಲ್ಲಿ ಮಾರಾಮಾರಿ ಘಟನೆಗಳು ನಡೆದಿತ್ತು. ಇದೀಗ ದೊಡ್ಡ ಮಟ್ಟದಲ್ಲಿ ನಡೆದ ಈ ಪ್ರಕರಣದಿಂದ ಜೈಲಿನ ಭದ್ರತಾ ವ್ಯವಸ್ಥೆಗಳ ಕುರಿತು ಮತ್ತೆ ಬೆರಳು ತೋರಿಸುವಂತಾಗಿದೆ. 
ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳದ ಸಂದರ್ಭ ಕೈಗೆ ಸಿಕ್ಕಿದ ಟ್ಯೂಬ್ ಲೈಟ್, ಕಲ್ಲು, ಪಾತ್ರೆ, ಕೋಲುಗಳಿಂದ ಕೈದಿಗಳು ಬಡಿದಾಡಿಕೊಂಡಿದ್ದಾರೆ. ಅಡುಗೆ ಮನೆಯಲ್ಲಿದ್ದ ಸಾಂಬಾರು, ಅನ್ನ, ಮತ್ತಿತರ ಪದಾರ್ಥಗಳನ್ನು ಚೆಲ್ಲಿ ಧ್ವಂಸಗೊಳಿಸಿದ್ದಾರೆ. 
ನೀರಿನ ಟ್ಯಾಂಕ್, ಕೊಡಪಾನ, ಸಿಸಿಟಿವಿ ಕ್ಯಾಮೆರಾಗಳೆಲ್ಲವನ್ನೂ ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಜೈಲು ಸಿಬ್ಬಂದಿಗೆ ಮೆಣಸಿನ ಹುಡಿ ಎರಚಿ, ಸಾಂಬಾರು ಎರಚಿ ಹಲ್ಲೆ ನಡೆಸಿದ್ದಾರೆ. ಇಡೀ ಜೈಲಿನ ಒಳಾವರಣಕ ಕೈದಿಗಳ ಹೊಡೆದಾಟಕ್ಕೆ ರಣಾರಂಗಣವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com