ಜೈಲು ಸೇರಿದ್ದರೂ ಪೊಲೀಸರಿಗೆ ತಪ್ಪಿಲ್ಲ ಎಸ್ಕೇಪ್ ಕಾರ್ತಿಕ್ ಕಾಟ!

ಬರೊಬ್ಬರಿ 70 ಮನೆಗಳಲ್ಲಿ ದರೋಡಿ ಮಾಡಿ ಇತ್ತೀಚೆಗಷ್ಟೇ ಸಿಕ್ಕಿಬಿದ್ದಿದ್ದ ನಟೋರಿಯಸ್ ಕಳ್ಳ ಎಸ್ಕೇಪ್ ಕಾರ್ತಿಕ್ ಜೈಲು ಸೇರಿದ್ದರೂ, ಪೊಲೀಸರಿಗೆ ಈತನ ಕಾಟ ತಪ್ಪಿಲ್ಲ.
ಮನೆಗಳ್ಳ ಎಸ್ಕೇಪ್ ಕಾರ್ತಿಕ್ (ಸಂಗ್ರಹ ಚಿತ್ರ)
ಮನೆಗಳ್ಳ ಎಸ್ಕೇಪ್ ಕಾರ್ತಿಕ್ (ಸಂಗ್ರಹ ಚಿತ್ರ)
ಬೆಂಗಳೂರು: ಬರೊಬ್ಬರಿ 70 ಮನೆಗಳಲ್ಲಿ ದರೋಡಿ ಮಾಡಿ ಇತ್ತೀಚೆಗಷ್ಟೇ ಸಿಕ್ಕಿಬಿದ್ದಿದ್ದ ನಟೋರಿಯಸ್ ಕಳ್ಳ ಎಸ್ಕೇಪ್ ಕಾರ್ತಿಕ್ ಜೈಲು ಸೇರಿದ್ದರೂ, ಪೊಲೀಸರಿಗೆ ಈತನ ಕಾಟ ತಪ್ಪಿಲ್ಲ.
ಪ್ರಸ್ತುತ ಕಳ್ಳತನ ಪ್ರಕರಣದಲ್ಲಿ ಕಾರ್ತಿಕ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ತಾತ್ಕಾಲಿಕವಾಗಿ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ, ಒಂದು ವೇಳೆ ಈತನೇನಾದರೂ ಜಾಮೀನಿನ ಮೇಲೆ ಹೊರಗೆ ಬಂದರೆ ಮತ್ತೆ ಪೊಲೀಸರಿಗೆ  ಕೆಲಸ ನೀಡುವುದರಲ್ಲಿ ಅನುಮಾನವೇ ಎನ್ನುತ್ತಿದ್ದಾರೆ ಈತನನ್ನು ಹತ್ತಿರದಿಂದ ಬಲ್ಲವರು. ಜಾಮೀನಿನ ಮೇಲೆ ಬಿಡುಗಡೆಯಾದರೂ ಈತ ತನ್ನ ಕಸುಬನ್ನು ಬಿಡದೇ ಮತ್ತೆ ಮನೆಗಳ ದಾಳಿ ಮಾಡಿ ಮತ್ತೆ ಪೊಲೀಸರಿಗೆ ಕೆಲಸ  ನೀಡುತ್ತಾನೆ ಎಂದು ಹೇಳುತ್ತಿದ್ದಾರೆ.
16ನೇ ವಯಸ್ಸಿನಲ್ಲೇ ಮೊದಲ ಕಳ್ಳತನ
ಕಳೆದ 13 ವರ್ಷಗಳಿಂದ ಕಳ್ಳತನ ಕೃತ್ಯಗಳಲ್ಲಿ ತೊಡಗಿರುವ ಆರೋಪಿ ಕಾರ್ತಿಕ್‌ ವಿರುದ್ಧ ಮೈಸೂರು, ಹಾಸನ ಸೇರಿದಂತೆ ಬೆಂಗಳೂರು ನಗರದ 26 ಬೇರೆ ಬೇರೆ ಪೊಲೀಸ್‌ ಠಾಣೆಗಳಲ್ಲಿ ಸುಮಾರು 70 ಅಪರಾಧ ಪ್ರಕರಣಗಳು  ದಾಖಲಾಗಿವೆ. ಹೆಣ್ಣೂರು ನಿವಾಸಿಯಾಗಿರುವ ಕಾರ್ತಿಕ್‌, 6ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾನೆ. 2005ರಲ್ಲಿ 16ನೇ ವಯಸ್ಸಿನಲ್ಲೇ ಕಳ್ಳತನಕ್ಕೆ ಇಳಿದಿದ್ದ. ಹೆಣ್ಣೂರಿನ ಒಂದು ಮನೆಯ ಕಿಟಕಿ ಮುರಿದು ಮನೆಯಲ್ಲಿದ್ದ 10 ಲಕ್ಷ  ರೂ. ನಗದು ಕಳ್ಳತನ ಮಾಡಿದ್ದ. ಮೊದಲ ಬಾರಿಯೇ ಭಾರಿ ಹಣ ಸಿಕ್ಕ ಕಾರಣ, ಕಳ್ಳತನ ವೃತ್ತಿಯನ್ನೇ ಮುಂದುವರೆಸಿದ್ದ. ಸಹಚರರ ಜತೆ ಸೇರಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಿಟಕಿ, ಬಾಗಿಲು ಮುರಿದು ಒಳನುಗ್ಗಿ ಕಳ್ಳತನ  ಮಾಡುತ್ತಿದ್ದ. ಬಳಿಕ ಆಭರಣಗಳನ್ನು ಅಡ ಇಟ್ಟು ಮೋಜಿನ ಜೀವನ ನಡೆಸುತ್ತಿದ್ದ. ಎರಡು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದ ಆರೋಪಿ, ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಮತ್ತೆ ಕಳ್ಳತನ ಮಾಡಿದ್ದ. ಈತ ಬರಿ  ಬೆಂಗಳೂರಿನಲ್ಲಷ್ಟೇ ಅಲ್ಲ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಕೈಚಳಕ ತೋರಿಸಿದ್ದಾನೆ. 70ಕ್ಕೂ ಹೆಚ್ಚಿನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಈತನ ಬಂಧನದಿಂದ ಕೊತ್ತನೂರು ಠಾಣೆಯಲ್ಲಿ ವರದಿಯಾಗಿದ್ದ 5 ಪ್ರಕರಣಗಳು, ಹಾಸನ  2, ಮೈಸೂರಿನ 1 ಪ್ರಕರಣ ಸೇರಿ 8 ಪ್ರಕರಣಗಳು ಪತ್ತೆಯಾಗಿವೆ. 
ಜೈಲಿನ ಊಟದ ವಾಹನದಲ್ಲಿ ಪರಾರಿಯಾಗಿದ್ದ
ಕ್ಷಣಮಾತ್ರದಲ್ಲಿ ಪೊಲೀಸರ ಕಣ್ಣುತಪ್ಪಿಸಿ ಎಸ್ಕೇಪ್ ಆಗುವುದರಲ್ಲಿ ನಿಸ್ಸೀಮನಾಗಿರುವ ಕಾರ್ತಿಕ್ ಇದೇ ಕಾರಣಕ್ಕೆ ಈತನನ್ನು ಎಸ್ಕೇಪ್ ಕಾರ್ತಿಕ್ ಎಂದು ಪೊಲೀಸರು ಕರೆಯುತ್ತಾರೆ. ಈ ಹಿಂದೆ ಸುಸಜ್ಜಿತ ಪರಪ್ಪನ ಅಗ್ರಹಾರ  ಜೈಲಿನಿಂದಲೇ 2 ಬಾರಿ ಪರಾರಿಯಾಗಿದ್ದ ದಾಖಲೆ ಈತನ ಹೆಸರಿನಲ್ಲಿದೆ. 2007ರಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಬಂಧಿತನಾಗಿ ಜೈಲು ಸೇರಿದ್ದ. ಆದರೆ, ಜೈಲಿನಲ್ಲಿ ಕೈದಿಗಳಿಗೆ ಊಟ ಸರಬರಾಜು ಮಾಡುವ ಇಸ್ಕಾನ್‌  ಸಂಸ್ಥೆಯ ಊಟದ ವಾಹನದ ಚಾರ್ಸಿ ಬಳಿ ಅವಿತುಕೊಂಡು ಜೈಲಿನಿಂದ ಪರಾರಿಯಾಗಿದ್ದ. 45 ದಿನಗಳ ಬಳಿಕ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದರು. ಅಂದಿನಿಂದ ಈತ ಎಸ್ಕೇಪ್‌ ಕಾರ್ತಿಕ್‌ ಎಂದೇ ಕುಖ್ಯಾತಿ ಗಳಿಸಿದ್ದ.
ಸಂಬಂಧಿಕರಿಗೆ ಅಸಮಾಧಾನ
ಈತನ ಕೃತ್ಯಗಳಿಂದಾಗಿ ಈತನ ಕುಟುಂಬಸ್ಥರೇ ಈತನ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕಾರ್ತಿಕ್ ಮದುವೆಯಾಗಿದ್ದು ಈತನಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಬೆಂಗಳೂರಿನಲ್ಲಿ ಈತನ ಪತ್ನಿ ಮತ್ತು ಸಹೋದರ ಜೀವನ  ನಡೆಸುತ್ತಿದ್ದು, ಈತನ ಯಾವುದೇ ಕಳ್ಳತನದ ಹಣವನ್ನು ಕುಟುಂಬಸ್ಥರು ಸ್ವೀಕರಿಸುತ್ತಿರಲಿಲ್ಲ. ಈತನ ಐಶಾರಾಮಿ ಜೀವನಕ್ಕಾಗಿ ಈತ ಕಳ್ಳತನ ಮಾಡುತ್ತಿದ್ದನಂತೆ. ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದ  7ಕ್ಕೂ ಹೆಚ್ಚು ಠಾಣೆಗಳ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ, ಜಾಮೀನು ಷರತ್ತು ಉಲ್ಲಂಘಿಸಿ ಆರೋಪಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ  ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಕಳೆದ ವರ್ಷ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ವಕೀಲರೊಬ್ಬರ ಮನೆಯಲ್ಲಿ ಆರೋಪಿ ಕಾರ್ತಿಕ್‌ ಸಹಚರರ ಜತೆ ಸೇರಿ ಕಳ್ಳತನ ಮಾಡಿದ್ದ. ಇತ್ತೀಚೆಗೆ  ಕಾರ್ತಿಕ್‌ ಸಹಚರರು ನಗರ ಪೊಲೀಸರ ಬಲೆಗೆ ಬಿದ್ದಿದ್ದರು. ಅವರ ವಿಚಾರಣೆ ವೇಳೆ, ಕಾರ್ತಿಕ್‌ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಎಂಬ ಸುಳಿವು ನೀಡಿದ್ದರು. ಸುಳಿವು ಆಧರಿಸಿ ಶೋಧ ಕಾರ್ಯ ನಡೆಸಿದ ಪೊಲೀಸರು ಆತನನ್ನ  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಸ್ತುತ ಕಾರ್ತಿಕ್ ಜೈಲಿನಲ್ಲಿದ್ದಾನೆಯಾದರೂ. ಮತ್ತೆ ಯಾವಾಗ ಎಸ್ಕೇಪ್ ಆಗುತ್ತಾನೋ ಎಂಬ ಭಯದಲ್ಲೇ ಪೊಲೀಸರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಆತನನ್ನು ಕಾಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com