ಸಿಜೆಐ ವಿರುದ್ಧ ಸಿಡಿದೆದ್ದ ನ್ಯಾಯಾಧೀಶರು: ನ್ಯಾಯಾಧೀಶರ ನಡೆಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

ಸಿಜೆಐ ದೀಪಕ್ ಮಿಶ್ರಾ ಅವರ ಕಾರ್ಯವೈಖರಿ ವಿರುದ್ಧ ಈವರೆಗೆ ಮುಸುಕಿನಲ್ಲೇ ಗುದ್ದಾಡುತ್ತಿದ್ದ ಸುಪ್ರೀಂಕೋರ್ಟ್'ನ ನಾಲ್ವರು ಹಿರಿಯ ನ್ಯಾಯಾಧೀಶರು ಬಹಿರಂಗವಾಗಿಯೇ ದಂಗೆ ಎದ್ದು ಅಸಮಾಧಾನ ಹೊರಹಾಕಿದ್ದಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ...
ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ
ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ
Updated on
ನವದೆಹಲಿ: ಸಿಜೆಐ ದೀಪಕ್ ಮಿಶ್ರಾ ಅವರ ಕಾರ್ಯವೈಖರಿ ವಿರುದ್ಧ ಈವರೆಗೆ ಮುಸುಕಿನಲ್ಲೇ ಗುದ್ದಾಡುತ್ತಿದ್ದ ಸುಪ್ರೀಂಕೋರ್ಟ್'ನ ನಾಲ್ವರು ಹಿರಿಯ ನ್ಯಾಯಾಧೀಶರು ಬಹಿರಂಗವಾಗಿಯೇ ದಂಗೆ ಎದ್ದು ಅಸಮಾಧಾನ ಹೊರಹಾಕಿದ್ದಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ. 
ದೇಶದ ನ್ಯಾಯಾಂಗ ಇತಿಹಾಸದಲ್ಲಿಯೇ ಎಂದೂ ಕಂಡು ಕೇಳರಿಯದ ಘಟನೆಯೊಂದು ನಿನ್ನೆ ನಡೆದಿತ್ತು. ಸುಪ್ರೀಂಕೋರ್ಟ್'ನ ನ್ಯಾಯಾಧೀಶರು ಮೊದಲ ಬಾರಿಗೆ ಸುದ್ದಿಗೋಷ್ಠಿಯನ್ನು ಕರೆದು ಸುಪ್ರೀಂಕೋರ್ಟ್ ಆಡಳಿತ ಕುರಿತಂತೆ ಹಾಗೂ ಮುಖ್ಯ ನ್ಯಾಯಾದೀಶರ ನಡೆಗೆ ತೀವ್ರ ಅಸಮಾಧಾನವನ್ನು ಹೊರಹಾಕಿದ್ದರು. 
ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸುತ್ತಿರುವ ಸುದ್ದಿ ಹೊರ ಬೀಳುತ್ತಿದ್ದಂತೆಯೇ ರಾಜ್ಯದ ಜನತೆ, ನ್ಯಾಯಾಧೀಶರೆಲ್ಲರ ಚಿತ್ತ ಮಾಧ್ಯಮಗಳ ಹೊರಳಲು ಆರಂಭಿಸಿತ್ತು. ನ್ಯಾಯಾಧೀಶರ ನಡೆಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. 
ನ್ಯಾಯಾಧೀಶರ ನಡೆಗೆ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆಯವರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ನ್ಯಾಯಾಧೀಶರ ನಡೆಯಿಂದಾಗಿ ನ್ಯಾಯಾಂಗಕ್ಕೆ ಸರಿಪಡಿಸಲಾಗದ ಹಾನಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಈ ರೀತಿಯ ಬೆಳವಣಿಗೆ ಸಾಂವಿಧಾನಿಕ ಬಿಕ್ಕಟ್ಟಿಗೆ ಸಮಾನ. ಒಬ್ಬ ಸುಪ್ರೀಂಕೋರ್ಟ್'ನ ನಿವೃತ್ತ ನ್ಯಾಯಮೂರ್ತಿಯಾಗಿ, ಈ ಬೆಳವಣಿಗೆಯಿಂದ ನಾನು ಜರ್ಝರಿತನಾಗಿದ್ದೇನೆ. ನ್ಯಾಯಾಂಗವನ್ನು ಸದಾ ಒಂದು ಕುಟುವೆಂದೇ ಪರಿಗಣಿಸಲಾಗಿದೆ. ಕುಟುಂಬದಲ್ಲಿ ಉಂಟಾದ ಕಲಹಗಳನ್ನು ಹೀಗೆ ಬೀದಿಗೆ ತರಬಾರದಿತ್ತು. ನಾಲ್ವರು ನ್ಯಾಯಾಧೀಶರುಗಳಿಗೆ ನೋವಾಗಿರಬಹುದು ಮತ್ತು ಅವರಿಗೆ ನೋವಾಗುವಂತಹ ಘಟನೆಗಳು ನಡೆಯಬಾರದಿತ್ತು. ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ,ಅವರು ದೂರು ತೋಡಿಕೊಳ್ಳಲು ಅನುಸರಿಸಿರುವ ಮಾರ್ಗ ತಪ್ಪು. ಆಂತರಿಕವಾಗಿಯೇ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದಿತ್ತು. ಬಯಲಿಗೆ ಬರುವ ಅಗತ್ಯವಿರಲಿಲ್ಲ. ಇದರಿಂದ ನ್ಯಾಯಾಂಗ ವ್ಯವಸ್ಥೆಗೆ ಆಗಿರುವ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ನ್ಯಾಯವಾದಿ ಪ್ರಸಾದ್ ಅವರು ಮಾತನಾಡಿ, ನ್ಯಾಯಮೂರ್ತಿ ಕರ್ಣನ್ ಅವರಿಗೆ ಶಿಕ್ಷೆ ನೀಡಿದಂತೆಯೇ ಈ ನಾಲ್ವರು ನ್ಯಾಯಾಧೀಶರಿಗೂ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ಅಡಿಯಲ್ಲಿ ಶಿಕ್ಷೆ ನೀಡಬೇಕು. ನ್ಯಾಯಮೂರ್ತಿ ಕರ್ಣನ್ ವಿರುದ್ಧ ಇದೇ ನ್ಯಾಯಮೂರ್ತಿಗಳು ಶಿಕ್ಷೆ ನೀಡಿದ್ದರು. ಇದೀಗ ಕರ್ಣನ್ ಅವರೂ ಕೂಡ ಈ ನಾಲ್ವರು ನ್ಯಾಯಾಧೀಶರಿಗೆ ಶಿಕ್ಷೆ ನೀಡುವಂತೆ ಸಿಜೆಐ ಅವರ ಬಳಿ ಆಗ್ರಹಿಸಬೇಕು ಎಂದು ಹೇಳಿದ್ದಾರೆ. 
ನ್ಯಾಯಮೂರ್ತಿ ಎಂ.ಎಫ್. ಸಲ್ದಾನ್ಹಾ ಅವರು ನ್ಯಾಯವಾದಿ ಪ್ರಸಾದ್ ಅವರು ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಾಲ್ವರು ನ್ಯಾಯಾಧೀಶರ ವಿರುದ್ಧ ನ್ಯಾಯಾಂಗ ನಿಂದನೆ ಅಡಿಯಲ್ಲಿ ಶಿಕ್ಷೆ ನೀಡುವುದು ಸರಿಯಲ್ಲ. ಇದನ್ನು ನಾನು ಬೆಂಬಲಿಸುವುದಿಲ್ಲ. ಶುಕ್ರವಾರ ಬೆಳವಣಿಗೆಗೂ ಕರ್ಣನ್ ಅವರ ಪ್ರಕರಣಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ ಎಂದು ತಿಳಿಸಿದ್ದಾರೆ. 
ನ್ಯಾಯಾಧೀಶರ ನಡೆ ಅಗತ್ಯವಾಗಿತ್ತು. ಹೀಗಾಗಿಯೇ ಜನರು ಕೂಡ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವದ ನ್ಯಾಯಾಂಗ ಇತಿಹಾಸದಲ್ಲಿಯೇ ಈ ರೀತಿ ಬೆಳವಣಿಗೆ ಎಂದಿಗೂ ನಡೆದಿಲ್ಲ. ಸುಪ್ರೀಂಕೋರ್ಟ್'ನಲ್ಲಿರುವ ಹಾಗೂ ಹೈಕೋರ್ಟ್ ನಲ್ಲಿರುವ ನ್ಯಾಯಾಧೀಶರು ಕೂಡ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೈಕೋರ್ಟ್ ನಲ್ಲಿರುವ ನ್ಯಾಯಾಧೀಶರು ಸಿಜೆಐ ಅವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಆದರೆ, ಸುಪ್ರೀಂಕೋರ್ಟ್ ನ್ಯಾಯಾಧೀಶರಿಗಾಗುತ್ತಿರುವ ಅನ್ಯಾಯದ ಕಥೆಯೇನು? ಸರ್ಕಾರ ಕೂಡ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಮಸ್ಯೆಗಳನ್ನು ಆಲಿಸುವುದಿಲ್ಲ. ನ್ಯಾಯಾಧೀಶ ಸಮಸ್ಯೆಗಳನ್ನು ತಿರಸ್ಕಾರದಿಂದ ನೋಡಬಾರದು ಎಂದು ಹೇಳಿದ್ದಾರೆ. 
ನ್ಯಾಯಾವಾದಿ ರಾಜಗೋಪಾಲ್ ಅವರು ಮಾತನಾಡಿ ನ್ಯಾಯಾಧೀಶರ ನಡೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಳಿಕ ವಕೀಲರೊಬ್ಬರು ಮಾತನಾಡಿ, ಸುದ್ದಿಗೋಷ್ಠಿ ನಡೆಸಿರುವ ನ್ಯಾಯಾಧೀಶರ ನಡೆ ಸರಿಯಾಗಿದೆ. ನ್ಯಾಯಾಂಗ ವ್ಯವಸ್ಥೆಯ ಒಲಗೆ ಏನಾಗುತ್ತಿದೆ ಎಂಬುದು ಜನರಿಗೆ ತಿಳಿಯಬೇಕು. ಈ ರೀತಿಯ ಘಟನೆ ಸಂವಿಧಾನದಲ್ಲಿ ಸಮಸ್ಯೆಗಳನ್ನು ಎದುರು ಮಾಡಬಹುದು ಮತ್ತು ನ್ಯಾಯಾಧೀಶರ ನೇಮಕಾತಿ ತಡವಾಗಿ ಆಗುವಂತಾಗಬಹುದು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com