ಬೆಂಗಳೂರು: ಗಾಂಜಾ ವ್ಯಸನಿಗಳಿಂದ ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ದಾಳಿ!

ರಾಜಧಾನಿ ಬೆಂಗಳೂರಿನಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಮಿತಿ ಮೀರಿದ್ದು, ಮಂಗಳವಾರ ರಾತ್ರಿ ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ.
ಜೆಜೆ ನಗರ ಪೊಲೀಸ್ ಠಾಣೆ
ಜೆಜೆ ನಗರ ಪೊಲೀಸ್ ಠಾಣೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಮಿತಿ ಮೀರಿದ್ದು, ಮಂಗಳವಾರ ರಾತ್ರಿ ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ.
ಬೆಂಗಳೂರಿನ ಪಾದರಾಯನಪುರದಲ್ಲಿ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಪೇದೆ ರಾಜೇಂದ್ರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಜೇಂದ್ರ ಅವರ ತಲೆ ಮತ್ತು ಕೈ ಗಳಿಗೆ  ಮಚ್ಚಿನೇಟು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದಾಗಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ ಸುಮಾರು 10.30ರ ಹೊತ್ತಿನಲ್ಲಿ ಪಾದರಾಯನಪುರದ 11ನೇ ಕ್ರಾಸ್ ನಲ್ಲಿ ಕೆಲ ಗಾಂಜಾ ವ್ಯಸನಿಗಳು ಗಲಾಟೆ ಮಾಡುತ್ತಿದ್ದರು. ಈ ವೇಳೆ ವಿಚಾರ ತಿಳಿದ ಜೆಜೆ ನಗರ ಪೊಲೀಸರು ಸ್ಥಳಕ್ಕೆ ಹೊಯ್ಸಳ ಪೊಲೀಸ್ ಪೇದೆ  ರಾಜೇಂದ್ರ ಅವರನ್ನು ಕಳುಹಿಸಿದ್ದಾರೆ. ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸ್ ಪೇದೆ ರಾಜೇಂದ್ರ ತೆರಳುತ್ತಿದ್ದಂತೆಯೆ ಮತ್ತಷ್ಟು ಆಕ್ರೋಶಗೊಂಡ ಗಾಂಜಾ ವ್ಯಸನಿಗಳು ತಮ್ಮ ಬಳಿಯಿದ್ದ ಲಾಂಗು, ಮಚ್ಚು ಸೇರಿದಂತೆ ವಿವಿಧ  ಮಾರಕಾಸ್ತ್ರಗಳಿಂದ ಪೇದೆ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಪೇದೆ ನೆರವಿಗೆ ಯಾರೂ ಬಂದಿಲ್ಲ. 
ಹಲ್ಲೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು, ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪೊಲೀಸ್ ಪೇದೆ ರಾಜೇಂದ್ರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಕರಣ  ದಾಖಲಿಸಿಕೊಂಡಿರುವ ಜೆಜೆನಗರ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇನ್ನು ಪಾದರಾಯನಪುರು, ಗೌರಿಪಾಳ್ಯ, ಮೈಸೂರು ರಸ್ತೆ ಸುತ್ತಮುತ್ತಲ ಪ್ರದೇಶದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಮಿತಿ ಮೀರಿದ್ದು, ರಾತ್ರಿಯಾಗುತ್ತಿದ್ದಂತೆಯೇ ರಸ್ತೆಗಿಳಿಯುವ ಇವರು ದಾರಿಹೋಕರ ಮೇಲೆ ದಾಳಿ ಮಾಡಿ ಹಣ,  ಒಡವೆ ಮತ್ತು ಮೊಬೈಲ್ ಗಳನ್ನು ಕಿತ್ತುಕೊಳ್ಳುತ್ತಾರೆ. ಸಾಕಷ್ಚು ಬಾರಿ ಪೊಲೀಸರಿಗೆ ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದರೂ, ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವಿದೆ. ಬಂಧನವಾದರೂ ಆರೋಪಿಗಳು  ಕೆಲವೇ ದಿನಗಳಲ್ಲಿ ಬಿಡುಗಡೆಯಾಗಿ ಮತ್ತೆ ತಮ್ಮ ಆಟಾಟೋಪ ಮುಂದುವರೆಸುತ್ತಾರೆ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com