ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಕಾಣಿಸಿಕೊಂಡ ಚಿರತೆ, ಮುಳ್ಳುಹಂದಿ; ವಿಡಿಯೋ ವೈರಲ್

ಆಹಾರ ಅರಸಿ ಬಂದಿದ್ದ ಚಿರತೆ ಮತ್ತು ಮುಳ್ಳುಹಂದಿಯ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಈ ಘಟನೆ ನಡೆದಿದೆ.
ರಸ್ತೆಯಲ್ಲಿ ಓಡಾಡುತ್ತಿರುವ ಚಿರತೆ, ಮುಳ್ಳುಹಂದಿ
ರಸ್ತೆಯಲ್ಲಿ ಓಡಾಡುತ್ತಿರುವ ಚಿರತೆ, ಮುಳ್ಳುಹಂದಿ
ಮೈಸೂರು: ಆಹಾರ ಅರಸಿ ಬಂದಿದ್ದ ಚಿರತೆ ಮತ್ತು ಮುಳ್ಳುಹಂದಿಯ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಈ ಘಟನೆ ನಡೆದಿದೆ.
ಭಾನುವಾರ ರಾತ್ರಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿ ಲೇಔಟ್ ನ ಗಾಲ್ಫ್​ ಕ್ಲಬ್​ ಹಾಗೂ ಖಾಸಗಿ ಹೋಟೆಲ್​ ರಸ್ತೆಯಲ್ಲಿ ಚಿರತೆ ಮತ್ತು ಮುಳ್ಳುಹಂದಿ ಆಹಾರ ಅರಸಿ ಬಂದಿದ್ದು, ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರು ಸವಾರರೊಬ್ಬರು ತಮ್ಮ  ಮೊಬೈಲ್ ನಲ್ಲಿ ಈ ದೃಶ್ಯ ಸೆರೆ ಹಿಡಿದಿದ್ದಾರೆ. ಆಹಾರ ಅರಸಿ ನಾಡಿನೊಳಗೆ ಬಂದಿದ್ದ ಚಿರತೆ ಮತ್ತು ಮುಳ್ಳುಹಂದಿ ಒಂದರ ಹಿಂದೆ ಒಂದರಂತೆ ರಸ್ತೆಯಲ್ಲಿ ನಡೆಯುವ ದೃಶ್ಯವನ್ನು ವಾಹನ ಸವಾರರು ಮೊಬೈಲ್​ನಲ್ಲಿ ಸೆರೆ  ಹಿಡಿದಿದ್ದಾರೆ.
ಆಹಾರಕ್ಕಾಗಿ ಮುಳ್ಳು ಹಂದಿ ಬಂದಿದ್ದರೆ, ಅದನ್ನು ಹಿಂಬಾಲಿಸಿಕೊಂಡು ಚಿರತೆ ಬಂದಿದೆ. ಈ ವೇಳೆ ಮುಳ್ಳು ಹಂದಿ ಚಿರತೆ ತನ್ನ ಮೇಲೆ ದಾಶಿ ಮಾಡುತ್ತದೆ ಎಂಬ ಭೀತಿಯಿಂದ ತನ್ನ ಮೇಮೇಲಿನ ಮುಳ್ಳುಗಳನ್ನು ಕೆದರಿ ಸಂಭಾವ್ಯ  ದಾಳಿಗೆ ಸಿದ್ದವಾಗಿ ಚಿರತೆ ಹಿಂದೆ ಸಾಗುತ್ತಿದ್ದ ದೃಶ್ಯ ವೈರಲ್ ಆಗಿದೆ. ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಈ ದೃಶ್ಯಾವಳಿಗಳು ಹೆಚ್ಚು ಪ್ರಮಾಣದಲ್ಲಿ ವೀಕ್ಷಿಸಲ್ಪಡುತ್ತಿವೆ. 
ಇನ್ನು ಚಾಮುಂಡಿ ಬೆಟ್ಟ ವ್ಯಾಪ್ತಿಯಲ್ಲಿ ಚಿರತೆಗಳು ಹೆಚ್ಚಾಗಿದ್ದು, ಅವು ಆಗಾಗ್ಗೆ ಆಹಾರ ಅರಸಿ ನಗರದೊಳಗೆ ಬರುವುದು ಸಾಮಾನ್ಯ. ಬೀದಿ ನಾಯಿಗಳ ಬೇಟೆಗಾಗಿಯೇ ಚಿರತೆಗಳು ನಗರ ಸರಹದ್ದಿಗೆ ಪ್ರವೇಶಿಸುತ್ತಿವೆ. ಕಾಡಿನಿಂದ  ಬರುವ ಚಿರತೆಗಳನ್ನು ಸೆರೆ ಹಿಡಿಯುವಂತೆ ಬೆಟ್ಟದ ತಪ್ಪಲಿನಲ್ಲಿರುವ ನಿವಾಸಿಗಳು ಪದೇಪದೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ, ಚಿರತೆ ಸೆರೆ ಹಿಡಿಯಲು ಬೋನುಗಳ ಕೊರತೆ ಇದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹಾರಿಕೆ  ಉತ್ತರ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಒಟ್ಟಾರೆ ಇದೀಗ ಚಿರತೆ ಮತ್ತು ಮುಳ್ಳು ಹಂದಿ ವಿಡಿಯೋ ಮೂಲಕ ಸ್ಥಳೀಯರು ಮತ್ತೆ ಅರಣ್ಯ ಇಲಾಖೆ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಜನವಸತಿ  ನಿವಾಸಗಳ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ನಾವು ಈಗಾಗಲೇ ಗಸ್ತು ತಿರುಗಿದ್ದೇವೆ. ಈ ವೇಳೆ ಸ್ಥಳೀಯರು ತಮ್ಮ ಮನೆಯಲ್ಲಿ ಉಳಿದ ಆಹಾರ ಪದಾರ್ಥ, ಕೋಳಿ ಮಾಂಸದಂತಹ ಪದಾರ್ಥಗಳನ್ನು ಹೊರಗೆ ಎಸೆದಿರುವುದು ಕಂಡುಬಂದಿದೆ. ಇಂತಹವುಗಳೇ ಕಾಡು ಪ್ರಾಣಿಗಳು ನಾಡಿಗೆ ಬರಲು ಪ್ರೇರೇಪಿಸುತ್ತವೆ. ನಾಡಿನಲ್ಲಿ ಸಿಗುವ ಇಂತಹ ಆಹಾರಗಳಿಗಾಗಿ ಪ್ರಾಣಿಗಳು ನಾಡಿಗೆ ಆಗಮಿಸುತ್ತವೆ. ಮೊದಲು ಇಂತಹವುಗಳನ್ನು ಜನ ನಿಲ್ಲಿಸಬೇಕು. 
ಅಂತೆಯೇ ಕಾಡು ಪ್ರಾಣಿಗಳನ್ನು ಕಂಡ ಕೂಡಲೇ ನಮಗೆ ಮಾಹಿತಿ ನೀಡಿ.. ಅದು ಬಿಟ್ಟು  ವನ್ಯಜೀವಿಗಳ ಅಡ್ಡಗಟ್ಟಿ ಫೋಟೋ ತೆಗೆದು ಅವುಗಳಿಗೆ ತೊಂದರೆ ಮಾಡುವುದು ಬೇಡ. ಅವುಗಳಿಗೆ ತೊಂದರೆಯಾದರೆ ಮಾತ್ರ ಅವರು  ಕೂಡ ತೊಂದರೆ ನೀಡುತ್ತವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com