ಮದುವೆ ಮಂಟಪಕ್ಕೆ ಬಂದು ಅಧಿಕಾರಿಗಳು ಫೋಟೋ ತೆಗೆದುಕೊಂಡು ಹೋದರೆ ಮಾತ್ರ 'ಶಾದಿ ಭಾಗ್ಯ'

ಶಾದಿಭಾಗ್ಯ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯಗಳ ಯುವತಿಯರಿಗೆ ನೀಡುವ ಹಣವನ್ನು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಶಾದಿಭಾಗ್ಯ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯಗಳ ವಧುವಿಗೆ ನೀಡುವ ಹಣವನ್ನು ಪಡೆಯಲು ನಕಲಿ ಫಲಾನುಭವಿಗಳು ಸೇರಿಕೊಳ್ಳುತ್ತಾರೆ ಎಂದು ಅಲ್ಪಸಂಖ್ಯಾತ ನಿರ್ದೇಶನಾಲಯಕ್ಕೆ ಗೊತ್ತಾದ ಬಳಿಕ ಇದೀಗ ಅಧಿಕಾರಿಗಳು ಹಣವನ್ನು ಖಾತೆಗಳಿಗೆ ವರ್ಗಾಯಿಸುವ ಮೊದಲು ಮದುವೆ ಮಂಟಪಕ್ಕೆ ಹೋಗಿ ನೋಡಿ ಖಾತ್ರಿಯಾದ ಬಳಿಕವಷ್ಟೇ ಹಣ ನೀಡಲು ಮುಂದಾಗಿದ್ದಾರೆ.

ಇನ್ನು ಮುಂದೆ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳು ಮದುವೆ ನಡೆಯುವ ಸ್ಥಳಕ್ಕೆ ಹೋಗಿ ಜೋಡಿ ಮದುವೆಯಾಗುವುದಕ್ಕೆ ಖಾತ್ರಿಯಾಗಿ ಫೋಟೋ ತೆಗೆದುಕೊಂಡು ಹೋದ ಬಳಿಕವಷ್ಟೇ ಅವರ ಖಾತೆಗೆ 50 ಸಾವಿರ ರೂಪಾಯಿ ಸಿಗುತ್ತದೆ. ಮದುವೆಯ ನೆಪದಲ್ಲಿ ಬಂದ ಅಧಿಕಾರಿಗಳು ಬಿರಿಯಾನಿಯನ್ನು ತಿಂದು ಬಾಯಿ ಚಪ್ಪರಿಸಿಕೊಂಡು ಹೋಗಬಹುದು.

ಕರ್ನಾಟಕ ಸರ್ಕಾರ 2013ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಆರಂಭವಾದ ಯೋಜನೆ ಶಾದಿಭಾಗ್ಯ. ಈ ಯೋಜನೆಯಡಿ ಮುಸ್ಲಿಂ, ಕ್ರಿಸ್ತಿಯನ್, ಸಿಖ್ ಮತ್ತು ಪಾರ್ಸಿ ಸಮುದಾಯದ ಕಡುಬಡವರಿಗೆ ಮದುವೆ ಸಂದರ್ಭದಲ್ಲಿ 50 ಸಾವಿರ ರೂಪಾಯಿ ಹಣ ನೀಡಲಾಗುತ್ತದೆ. ಶಾದಿ ಭಾಗ್ಯ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ 66,010 ವಧುಗಳು ಮದುವೆ ಸಮಯದಲ್ಲಿ ತಲಾ 50 ಸಾವಿರ ರೂಪಾಯಿ ಪಡೆದಿದ್ದು ರಾಜ್ಯ ಸರ್ಕಾರ 330 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಿನಿಯೋಗಿಸಿದೆ.

ಸಮಾಜದ ಕಡುಬಡ ಕುಟುಂಬದವರಿಗೆ ಇರುವ ಯೋಜನೆಯಿದು. ಆದರೆ ಬೆಂಗಳೂರು ನಗರ, ಕಲಬುರ್ಗಿ, ಬೆಳಗಾವಿಗಳಲ್ಲಿ ಜನಪ್ರತಿನಿಧಿಗಳ ಪ್ರಭಾವ ಬಳಸಿ ಹಲವು ಅನರ್ಹರು ಕೂಡ ಹಣ ಪಡೆದುಕೊಂಡಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಮದುವೆ ನಡೆಯದೆ ಅವರ ಖಾತೆಗಳಿಗೆ ಹಣ ಸಂದಾಯವಾದ ಉದಾಹರಣೆಗಳು ಕೂಡ ಇವೆ ಎಂದು ಅಲ್ಪಸಂಖ್ಯಾತ ನಿರ್ದೇಶನಾಲಯ ಅಧಿಕಾರಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಶಾದಿಭಾಗ್ಯದಡಿ ಹಣ ಸಿಗಬೇಕೆಂದರೆ ಇಲಾಖೆಗೆ ಮದುವೆಗಿಂತ ಕನಿಷ್ಠ ಒಂದು ವಾರ ಮೊದಲು ಲಗ್ನ ಪತ್ರಿಕೆ ಜೊತೆಗೆ ಅರ್ಜಿ ಸಲ್ಲಿಸಬೇಕು. ಆಗ ಇಲಾಖೆಯ ತಾಲ್ಲೂಕು ಅಧಿಕಾರಿಗಳು ನಿಜವಾಗಿಯೂ ಮದುವೆ ನಡೆಯುತ್ತಿದೆಯೇ ಎಂದು ಖಚಿತಪಡಿಸಲು ಮದುವೆ ನಡೆಯುವ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಮದುವೆ ಮಂಟಪದಲ್ಲಿ ವಧು-ವರನ ಫೋಟೋ ಹಾಗೂ ಮದುವೆ ನಡೆದ ಸ್ಥಳದ ಫೋಟೋ ತೆಗೆದು ಕಂಪ್ಯೂಟರ್ ಗೆ ಅಪ್ ಲೋಡ್ ಮಾಡುತ್ತಾರೆ ಎಂದರು ಅಲ್ಪಸಂಖ್ಯಾತ ನಿರ್ದೇಶನಾಲಯ ನಿರ್ದೇಶಕ ಅಕ್ರಂ ಪಾಶಾ.

ಹಣ ಬಿಡುಗಡೆ ಮಾಡುವುದರಲ್ಲಿ ಕೂಡ ಇಲಾಖೆ ಕೆಲವು ಬದಲಾವಣೆಗಳನ್ನು ತಂದಿದೆ. ಈ ಹಿಂದೆ ಮದುವೆಯಾದ ಆರು ತಿಂಗಳೊಳಗೆ ವಧುವಿನ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತಿತ್ತು. ಆದರೆ ಹಣ ವಧುವಿನ ಖಾತೆಗೆ ಹೋದರೆ ಅದನ್ನು ವರ ಅಥವಾ ಅವನ ಮನೆಯವರು ವಧುವಿನ ಮೇಲೆ ಒತ್ತಡ ಹಾಕಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಮದುವೆಗೆ ಹಣ ಖರ್ಚು ಮಾಡಿದ ವಧುವಿನ ಪೋಷಕರ ಖಾತೆಗಳಿಗೆ ಹಣ ವರ್ಗಾಯಿಸುತ್ತೇವೆ ಎಂದರು ಪಾಶಾ. ಇನ್ನು ಮುಂದೆ ಶಾದಿ ಭಾಗ್ಯ ಯೋಜನೆಯಡಿ ಹಣ ಪಡೆಯಲು ಬಿಪಿಎಲ್ ಕಾರ್ಡು ಸಲ್ಲಿಸಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com