ಅಣೆಕಟ್ಟುಗಳು ಭರ್ತಿಯಾಗುವ ಲಕ್ಷಣ; ರೈತರ ಮೊಗದಲ್ಲಿ ಮೂಡುವುದೇ ಮಂದಹಾಸ?

ಸುಮಾರು ದಶಕ ಕಳೆದ ನಂತರ ಮೊದಲ ಬಾರಿಗೆ ಮುಂಗಾರು ಋತುವಿನಲ್ಲಿ ರಾಜ್ಯದ ಕಾವೇರಿ ಕೊಳ್ಳದ ...
ಮಂಡ್ಯ ಜಿಲ್ಲೆಯ ಕೆಆರ್ ಎಸ್ ಅಣೆಕಟ್ಟು
ಮಂಡ್ಯ ಜಿಲ್ಲೆಯ ಕೆಆರ್ ಎಸ್ ಅಣೆಕಟ್ಟು

ಬೆಂಗಳೂರು: ಸುಮಾರು ದಶಕ ಕಳೆದ ನಂತರ ಮೊದಲ ಬಾರಿಗೆ ಮುಂಗಾರು ಋತುವಿನಲ್ಲಿ ಕಾವೇರಿ ಕೊಳ್ಳದ ಜಲಾಶಯ ಈ ತಿಂಗಳ ಅಂತ್ಯಕ್ಕೆ ಭರ್ತಿಯಾಗುವ ಲಕ್ಷಣ ಕಂಡುಬರುತ್ತಿದೆ.

ನಿನ್ನೆ ಸಂಜೆ ವೇಳೆಗೆ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟು ಸಂಪೂರ್ಣ ತುಂಬಲು ಕೇವಲ 3 ಅಡಿ ಬಾಕಿಯಾಗಿತ್ತು. ಈ ಜಲಾಶಯದ ಒಟ್ಟು ಸಾಮರ್ಥ್ಯ 124.8 ಅಡಿಗಳಷ್ಟಾಗಿದ್ದು ನಿನ್ನೆ 124.5 ಅಡಿ ತುಂಬಿತ್ತು. ಜಲಾಶಯದಲ್ಲಿ ನೀರಿನ ಒಳಹರಿವು 30 ಸಾವಿರ ಕ್ಯೂಸೆಕ್ಸ್ ನಷ್ಟು ಹೆಚ್ಚುವರಿಯಾಗಿದೆ. ಇದೇ ಪ್ರಮಾಣದಲ್ಲಿ ಮಳೆ ಮುಂದುವರಿದರೆ ಮುಂದಿನ ವಾರ ಜಲಾಶಯದ ನೀರಿನ ಮಟ್ಟ ಭರ್ತಿಯಾಗುವ ಸಾಧ್ಯತೆಯಿದೆ.

ಈ ಮಧ್ಯೆ, ಜಲಾಶಯದ ನೀರಿನ ಮಟ್ಟ ಏರಿಕೆಯಾಗಲಿರುವುದರಿಂದ ಕಾವೇರಿ ಜಲಾನಯನದ ತಗ್ಗು ಪ್ರದೇಶಗಳಲ್ಲಿರುವ ಜನತೆಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ವಿವಾದಗಳು ಹೆಚ್ಚಾಗಿದ್ದವು. ಆದರೆ ಈ ವರ್ಷ ಹೆಚ್ಚು ಮಳೆಯ ಕಾರಣದಿಂದಾಗಿ ಕರ್ನಾಟಕದಿಂದ ನಿಗದಿತ ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆಯಾಗಲಿರುವುದರಿಂದ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿದೆ.

ಇಲ್ಲಿಯವರೆಗೆ ಮಂಡ್ಯ, ಮೈಸೂರು ಭಾಗದ ರೈತರು ಮಳೆಯ ಅಭಾವದಿಂದ ನೀರಿನ ಕೊರತೆಯಿಂದಾಗಿ ಭತ್ತದ ಬೆಳೆಯನ್ನು ಬೆಳೆಯಲು ಅಷ್ಟೊಂದು ಉತ್ಸಾಹ ತೋರಿಸುತ್ತಿರಲಿಲ್ಲ. ರಾಜ್ಯದ ಎಲ್ಲಾ ಭಾಗಗಳಲ್ಲಿ ಈ ಬಾರಿ ಸಾಕಷ್ಟು ಮಳೆಯಾಗಿದ್ದರೂ ಕಳೆದ ಹಲವು ವರ್ಷಗಳಲ್ಲಿನ ಬರಗಾಲ ರೈತರ ಆತಂಕವನ್ನು ಇನ್ನೂ ಕಡಿಮೆ ಮಾಡಿಲ್ಲ. ವಿಶೇಷವಾಗಿ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಇನ್ನು ಕೂಡ ನೀರಿನ ಅಭಾವದಿಂದ ರೈತರು ಬಳಲುತ್ತಿದ್ದಾರೆ. ಇದರಿಂದಾಗಿ ಹೆಚ್ಚು ನೀರನ್ನು ಬೇಡುವ ಬೆಳೆಗಳನ್ನು ಬೆಳೆಯಲು ರೈತರು ಹಿಂದುಮುಂದು ನೋಡುತ್ತಿದ್ದಾರೆ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ವಾಯುಮಂಡಲ ಮತ್ತು ಸಾಗರ ವಿಜ್ಞಾನ ಕೇಂದ್ರದ ಜಿ ಎಸ್ ಭಟ್.

ಈ ವರ್ಷ ಜುಲೈ ವೇಳೆಗೆ ಒಟ್ಟಾರೆ ಮಳೆಯ ಪ್ರಮಾಣದಲ್ಲಿ ವೈಪರೀತ್ಯ ಸಹಜವಾಗಿತ್ತು. ಬೆಂಗಳೂರು ನಗರ ಪ್ರದೇಶದಲ್ಲಿ 650 ಮಿಲಿಮೀಟರ್ ಮಳೆಯಾಗಿದ್ದು ಅದು 1500 ಮಿಲಿ ಮೀಟರ್ ನಿಂದ 1700 ಮಿಲಿ ಮೀಟರ್ ಗೆ ಹೆಚ್ಚಾಗುವ ಸಾಧ್ಯತೆಯಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಹರಡುವಿಕೆ ಮುಂದುವರಿಯಲಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಕೇಂದ್ರದ ಎಸ್ ಎಸ್ ಎಂ ಗಾವಸ್ಕರ್.

ಸತತ ಮೂರು ವರ್ಷಗಳ ಕಾಲ ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಹೋರಾಟ ನಡೆಸಿಕೊಂಡು ಬಂದ ಕರ್ನಾಟಕ ಈ ವರ್ಷ ಸ್ವಲ್ಪ ಮಟ್ಟಿಗೆ ನಿರಾಳತೆ ಅನುಭವಿಸಿದೆ. ಜುಲೈ 1ರಿಂದ 12ರವರೆಗೆ ಕರ್ನಾಟಕ ತಮಿಳುನಾಡಿಗೆ 28.08 ಟಿಎಂಸಿ ನೀರನ್ನು ಬಿಟ್ಟಿದೆ. ಹೊಸ ನೀರು ಹಂಚಿಕೆ ಒಪ್ಪಂದ ಪ್ರಕಾರ, ಜುಲೈ 31ರ ವೇಳೆಗೆ ಕರ್ನಾಟಕ ತಮಿಳುನಾಡಿಗೆ 40.43 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com