ಬೆಂಗಳೂರು ಸಮಸ್ಯೆಗೆ ವಾಸ್ತವ ಪರಿಹಾರ ಹುಡುಕಲು ಉಸ್ತುವಾರಿ ಸಚಿವ ಪರಮೇಶ್ವರ್ ಪ್ರವಾಸ

ಬೆಂಗಳೂರು ನಗರದ ಸಮಸ್ಯೆಗಳಿಗೆ ತಳಮಟ್ಟದ ಪರಿಹಾರ ಕಂಡುಹಿಡಿಯಲು ಎಲ್ಲಾ 28 ವಿಧಾನಸಭಾ ....
ಸಭೆ ನಡೆಸಿದ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್
ಸಭೆ ನಡೆಸಿದ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್

ಬೆಂಗಳೂರು: ಬೆಂಗಳೂರು ನಗರದ ಸಮಸ್ಯೆಗಳಿಗೆ ತಳಮಟ್ಟದ ಪರಿಹಾರ ಕಂಡುಹಿಡಿಯಲು ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ ವಾರದಿಂದ ಪ್ರವಾಸ ಕೈಗೊಳ್ಳುವುದಾಗಿ ನಗರ ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನ ಸಂಸದರು ಮತ್ತು ಶಾಸಕರೊಂದಿಗೆ ನಿನ್ನೆ ಬೆಂಗಳೂರಿನಲ್ಲಿ ಮೂರು ಗಂಟೆಗಳಿಗೂ ಅಧಿಕ ಕಾಲ ಸಭೆ ನಡೆಸಿದ ಅವರು, ನಗರದ ಹತ್ತು ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಸ್ವಚ್ಛತೆ, ವಾಹನ ದಟ್ಟಣೆ, ಸಂಚಾರ, ಡ್ರಗ್ ಮಾಫಿಯಾ, ಬಿಬಿಎಂಪಿಯನ್ನು ವಿಭಜಿಸಿ ಈಗಿರುವ ಮುನ್ಸಿಪಲ್ ಕಾರ್ಪೊರೇಶನ್ ಕಾಯ್ದೆಗೆ ಬದಲಾಗಿ ಹೊಸ ಕಾಯ್ದೆ ರಚನೆ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಸಿದರು.

ಪೌರಕಾರ್ಮಿಕರಿಗೆ ವೇತನ ಪಾವತಿ ಬಗ್ಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಅಭಿವೃದ್ಧಿಪರ ನಿಧಿಗಳ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಬಿಜೆಪಿ ಜನಪ್ರತಿನಿಧಿಗಳು ಆರೋಪಿಸಿದರು. ಪರಮೇಶ್ವರ್ ಅವರು ಪ್ರತಿದಿನ ಮೂರು ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮೂರು ಭಾಗಗಳಾಗಿ ಮಾಡುವ ಪ್ರಸ್ತಾಪ ಪರಿಗಣನೆಯಲ್ಲಿದ್ದು, ಬಿಬಿಎಂಪಿಗೆ ಹೊಸ ಮತ್ತು ಗಟ್ಟಿ ಆಡಳಿತ ಬೇಕಾಗಿದೆ. ಪ್ರಸ್ತುತ ಬಿಬಿಎಂಪಿಯಲ್ಲಿ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ ಕಾಯ್ದೆಯನ್ನು ಅನುಸರಿಸಲಾಗುತ್ತಿದೆ.

ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್,ಡ್ರಗ್ ವ್ಯಸನಿಗಳು 2 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಬೇಕೆಂದು ಮತ್ತು ಡ್ರಗ್ ಮಾರಾಟದಲ್ಲಿ ತೊಡಗಿರುವವರಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಬೇಕೆಂದು ನಾನು ಸಭೆಯಲ್ಲಿ ಸಲಹೆ ನೀಡಿದ್ದೇನೆ ಎಂದರು.

ಸಭೆಯಲ್ಲಿ, ಬಿಜೆಪಿ ಶಾಸಕರು ಸರ್ಕಾರ, ಕಾಂಗ್ರೆಸ್ ಮತ್ತು ಜೆಡಿಎಸ್ ಜನಪ್ರತಿನಿಧಿಗಳ ಕ್ಷೇತ್ರದ ಪರವಾಗಿದೆ ಎಂದು ಆರೋಪಿಸಿದರು.

ನಗರದ ಕಸ ವಿಲೇವಾರಿ ಸಮಸ್ಯೆಗೆ ಕಸದಿಂದ ಇಂಧನ ತಯಾರಿಸುವ ಯೋಜನೆಯ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ನಿರ್ಭಯ ಯೋಜನೆಯಡಿ 650 ಕೋಟಿ ರೂಪಾಯಿ ವೆಚ್ಚದಲ್ಲಿ 5 ಸಾವಿರ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಬಿಬಿಎಂಪಿ ವಲಯದ 150 ಶಾಲೆಗಳಲ್ಲಿ 70 ಶಾಲೆಗಳನ್ನು ಬಿಬಿಎಂಪಿಯ ನೇರ ಆಡಳಿತದಡಿಯಲ್ಲಿ ತರಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com