ಆರೋಗ್ಯ ಇಲ್ಲದಿದ್ದರೂ, ಸಂಬಳ ಬರದಿದ್ದರೂ ಕೆಲಸ ಮಾಡಲೇಬೇಕು; ಇದು ಪೌರಕಾರ್ಮಿಕರ ಬದುಕು-ಬವಣೆ

40 ವರ್ಷದ ಉಮಾ ನಾಲ್ಕು ಮಕ್ಕಳ ತಾಯಿ, ಅಷ್ಟೇ ಅಲ್ಲ ಆಕೆಯ ತಾಯಿಯನ್ನು ನೋಡಿಕೊಳ್ಳುವ ...
ಪೌರಕಾರ್ಮಿಕ ಉಮಾ
ಪೌರಕಾರ್ಮಿಕ ಉಮಾ

ಬೆಂಗಳೂರು: 40 ವರ್ಷದ ಉಮಾ ನಾಲ್ಕು ಮಕ್ಕಳ ತಾಯಿ, ಅಷ್ಟೇ ಅಲ್ಲ ಆಕೆಯ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಇದೆ. ಕೆಲ ವರ್ಷಗಳ ಹಿಂದೆ ಮದ್ಯವ್ಯಸನದಿಂದ ಆಕೆಯ ಪತಿ ತೀರಿಕೊಂಡಿದ್ದರು. ಮದುವೆಯಾದಾಗಿನಿಂದ ಬೆಂಗಳೂರಿನಲ್ಲಿ ಪೌರಕಾರ್ಮಿಕಳಾಗಿ ದುಡಿಯುತ್ತಿರುವ ಉಮಾ 18 ವರ್ಷದವಳಾಗಿದ್ದಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡಿದ್ದರು.

ಅಲ್ಲಿಂದ ಪಾಲಿಕೆಯಲ್ಲಿ 22 ವರ್ಷಗಳಿಂದ ದುಡಿಯುತ್ತಿದ್ದಾರೆ. ಆದರೆ ಕೆಲಸದ ಕಾರ್ಯವೈಖರಿ, ಅನಾರೋಗ್ಯ, ವೇತನ ಸರಿಯಾಗಿ ಸಿಗದಿರುವುದರಿಂದ ಬೇಸತ್ತು ಒಂದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೂ ಇದೆ. ತಿಂಗಳಿಗೆ ಕೊಡುವ 12 ಸಾವಿರ ರೂಪಾಯಿ ವೇತನದಲ್ಲಿ ತನ್ನ ಕುಟುಂಬದ 6 ಮಂದಿಯ ಸಂಸಾರವನ್ನು ತೂಗಿಸಬೇಕು.

ಉಮಾ ಕೆಲಸ ಮಾಡುತ್ತಿರುವುದು ಇಂದಿರಾನಗರ ವಾರ್ಡ್ ನಲ್ಲಿ. ಇಲ್ಲಿ ಜನವಸತಿ ಹೆಚ್ಚಿರುವುದರಿಂದ, ಪಬ್, ರೆಸ್ಟೋರೆಂಟ್ ಗಳು ಅಧಿಕವಾಗಿರುವುದರಿಂದ ಉಮಾಗೆ ಕೆಲಸದ ಹೊರೆ ಕೂಡ ಅಧಿಕ. ಮುಖ್ಯ ರಸ್ತೆಗಳಲ್ಲಿ ಮರ ಗಿಡಗಳ ಸಂಖ್ಯೆ ಹೆಚ್ಚು. ಒಂದು ದಿನ ಕೂಡ ನಾವು ಕಸ ಗುಡಿಸದಿದ್ದರೆ ಮರುದಿನ ರಸ್ತೆ, ಚರಂಡಿ ತುಂಬೆಲ್ಲಾ ಕಸ ಮತ್ತು ಮರಗಿಡಗಳ ಎಲೆಗಳು ತುಂಬಿರುತ್ತದೆ ಎನ್ನುತ್ತಾರೆ ಉಮಾ.

ಇತ್ತೀಚೆಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ರಾಜ್ಯ ಸರ್ಕಾರಕ್ಕೆ ಐಪಿಡಿ ಸಾಲಪ್ಪ ವರದಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿತ್ತು. ಈ ವರದಿ ಪ್ರಕಾರ, ಪ್ರತಿ 500 ಮಂದಿಗೆ ಒಬ್ಬ ಪೌರ ಕಾರ್ಮಿಕ ಇರಬೇಕು. ಕರ್ನಾಟಕದಲ್ಲಿರುವ ಸುಮಾರು 42 ಸಾವಿರ ಪೌರಕಾರ್ಮಿಕರಲ್ಲಿ 32 ಸಾವಿರ ಮಂದಿ ಕಾರ್ಮಿಕರು ಗುತ್ತಿಗೆ ನೌಕರರು. ಸರ್ಕಾರ 11 ಸಾವಿರ ಖಾಯಂ ಪೌರಕಾರ್ಮಿಕರನ್ನು ನೇಮಕ ಮಾಡಿಕೊಂಡಿದೆ. ಉಳಿದ 31 ಸಾವಿರ ಪೌರಕಾರ್ಮಿಕರಲ್ಲಿ 8 ಸಾವಿರ ಮಂದಿಯನ್ನು ತೆಗೆದುಹಾಕುವ ಯೋಜನೆಯಲ್ಲಿ ಸರ್ಕಾರವಿದೆ.

ಪ್ರಸ್ತುತ ಕರ್ನಾಟಕದಲ್ಲಿ ಪ್ರತಿ 700 ಮಂದಿಗೆ ಒಬ್ಬ ಪೌರಕಾರ್ಮಿಕರಿದ್ದಾರೆ. ವಾರ್ಡುಗಳ ಜನಸಂಖ್ಯೆಯನ್ನು ಹೊರತುಪಡಿಸಿ 1: 700 ಆಧಾರದಲ್ಲಿ ಪೌರಕಾರ್ಮಿಕರನ್ನು ನೇಮಿಸಲಾಗುತ್ತದೆ. ವಾಣಿಜ್ಯ ಪ್ರದೇಶಗಳಲ್ಲಿ ಇದರಿಂದ ಪೌರಕಾರ್ಮಿಕರಿಗೆ ಕೆಲಸದ ಹೊರೆ ಅಧಿಕವಾಗುತ್ತದೆ. ಮಳೆ ಬರುವಾಗ ಇನ್ನೂ ಅಧಿಕ. ನಾವು ಧರಿಸುವ ಚಪ್ಪಲಿಯಲ್ಲಿ ನಡೆದು ನಾವು ಖರೀದಿಸಿದ ಪೊರಕೆಯಲ್ಲಿಯೇ ಗುಡಿಸುತ್ತೇವೆ. ನಮಗೆ ಗಮ್ ಬೂಟ್ಸ್ ಪೂರೈಕೆ ಮಾಡುವುದಿಲ್ಲ. ಬೆಳಗ್ಗೆ 4 ಗಂಟೆಗೆ ಎದ್ದು ಕೆಲಸ ಆರಂಭಿಸುತ್ತೇವೆ. ಕುಟುಂಬದವರಿಗೆ ಬೆಳಗಿನ ತಿಂಡಿ ತಯಾರಿಸಿದ ನಂತರ 5.45ಕ್ಕೆ ಮನೆಯಿಂದ ಹೊರಡುತ್ತೇವೆ. ಮನೆಯಿಂದ 20 ನಿಮಿಷಗಳಲ್ಲಿ ಇಂದಿರಾನಗರ 100 ಅಡಿ ರಸ್ತೆ ಸಿಗುತ್ತದೆ. ಅಲ್ಲಿ ಸಿಎಚ್ ಎಂ ಪಾರ್ಕ್ ನಿಂದ ಚಿನ್ಮಯ ಮಿಷನ್ ರಸ್ತೆಯವರೆಗೆ ಕಸ ಗುಡಿಸುತ್ತೇವೆ. ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ ಎನ್ನುತ್ತಾರೆ ಉಮಾ.

ಬೆಳಗ್ಗೆ 10 ಗಂಟೆಗೆ ಬಯೋಮೆಟ್ರಿಕ್ ಹಾಜರಾತಿ ನೀಡಬೇಕು, ಇಲ್ಲದಿದ್ದರೆ ಆ ದಿನದ ಸಂಬಳ ಕಡಿತ ಮಾಡುತ್ತಾರೆ. ಕಸ ತೆಗೆದುಕೊಂಡು ಹೋಗುವ ಟ್ರಾಲಿಗೆ ಏನಾದರೂ ಆದರೆ ನಾವು ರಿಪೇರಿ ಮಾಡಿಸಬೇಕು. ಮಕ್ಕಳ, ಮನೆ ಖರ್ಚೆಲ್ಲಾ ಸೇರಿ 5 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ನನಗೆ ಆರೋಗ್ಯ ಸಮಸ್ಯೆ ಇದೆ, ಅದಕ್ಕೆ ಸಾವಿರಗಟ್ಟಲೆ ವೆಚ್ಚವಾಗುತ್ತದೆ ಎನ್ನುವ ಉಮಾ ಇಂದಿರಾ ಅರ್ಜುನ ಸೇವಾ ಸಂಘದ ಕೊಳಚೆ ಪ್ರದೇಶದಲ್ಲಿ ಉಮಾ ವಾಸಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com