ಕಾಂಗ್ರೆಸ್ ಕಚೇರಿಗೆ ನುಗ್ಗಿ ದಾಂಧಲೆ: ಪೇದೆ ಮೇಲೆ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದ್ದ ರೌಡಿಗೆ ಗುಂಡು!

ಕಾಂಗ್ರೆಸ್'ನ ಬ್ಲಾಕ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದ ಆರೋಪಿಯನ್ನು ಬಂಧನಕ್ಕೊಳಪಡಿಸಲು ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನ ನಡೆಸಿದ್ದ ರೌಡಿಶೀಟರ್'ಗೆ ಕಾಲಿಗೆ ಗುಂಡು ಹಾರಿಸಿದ ಪೊಲೀಸರು, ರೌಡಿಯನ್ನು ಬಂಧಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕಾಂಗ್ರೆಸ್'ನ ಬ್ಲಾಕ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದ ಆರೋಪಿಯನ್ನು ಬಂಧನಕ್ಕೊಳಪಡಿಸಲು ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನ ನಡೆಸಿದ್ದ ರೌಡಿಶೀಟರ್'ಗೆ ಕಾಲಿಗೆ ಗುಂಡು ಹಾರಿಸಿದ ಪೊಲೀಸರು, ರೌಡಿಯನ್ನು ಬಂಧಿಸಿದ್ದಾರೆ. 
ಕೆ.ಪಿ ಅಗ್ರಹಾರದ ಕಿರಣ್ ಕುಮಾರ್ ಅಲಿಯಾಸ್ ಕಿರ್ಬ (30) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯ ಕಾಲಿಗೆ ಗುಂಡೇಟು ತಗುಲಿದ್ದು, ಪ್ರಸ್ತುತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 
ಘಟನೆಯಲ್ಲಿ ಪೇದೆ ನಾಗರಾಜಪ್ಪ ಎಂಬುವವರೂ ಕೂಡ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪೊಲೀಸರು ಹೇಳಿದ್ದಾರೆ. 
ಜು.25 ರಂದು ಆರೋಪಿ ತನ್ನ ಗ್ಯಾಂಗ್ ನೊಂದಿಗೆ ಕೆ.ಪಿ. ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಚೋಳರಪಾಳ್ಯದ 2ನೇ ಕ್ರಾಸ್'ನ ಭುವನೇಶ್ವರಿ ನಗರದಲ್ಲಿನ ಕಾಂಗ್ರೆಸ್ ಬ್ಲಾಕ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದ. ಈ ವೇಳೆ ಹೆದರಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. 
ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪಶ್ಚಿಮ ವಿಭಾಗ ಡಿಸಿಪಿ ರವಿ ಚೆನ್ನಣ್ಣನವರ್ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚನೆ ಮಾಡಿದ್ದರು. 
ಶನಿವಾರ ತಡರಾತ್ರಿ 12.45ರ ಸುಮಾರಿಗೆ ಕೆ.ಪಿ.ಅಗ್ರಹಾರ ಇನ್ಸ್'ಪೆಕ್ಟರ್ ಎಸ್.ಎಸ್. ಮಂಜು ಅವರಿಗೆ ಕೆ.ಪಿ. ಅಗ್ರಹಾರ ರೈಲು ಬ್ರಿಡ್ಜ್ ಪಕ್ಕದ ಬಿನ್ನಿ ಕ್ಯಾಂಟೀನ್ ಹತ್ತಿರ ಕಿರಣ್ ಇರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. 
ಈ ವೇಳೆ ತನ್ನ ಸಿಬ್ಬಂದಿಯೊಂದಿಗೆ ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ. ಆರೋಪಿ ತಪ್ಪಿಸಿಕೊಳ್ಳಲು ಯತ್ನ ನಡೆಸಿದ್ದಾನೆ. ಮುಖ್ಯ ಪೇದೆ ನಾಗರಾಜಪ್ಪ ಹಿಡಿಯಲು ಮುಂದಾದಾಗ ಆರೋಪಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಎಚ್ಚೆತ್ತ ಪೊಲೀಸರು ಸರ್ವಿಸ್ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಓಡುತ್ತಿದ್ದ ರೌಡಿ ಬಲ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿ ಕುಸಿದು ಬಿದ್ದ ಬಳಿಕ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com