ಕರ್ನಾಟಕದಲ್ಲಿ ಯಾವುದಾದರು ನಾಯಿ ಸತ್ತರೂ ಪ್ರಧಾನಿ ಮೋದಿ ಜವಾಬ್ದಾರಿಯೇ?: ಪ್ರಮೋದ್ ಮುತಾಲಿಕ್

ಸದಾ ಒಂದಿಲ್ಲೊಂದು ವಿವಾದಕ್ಕೆ ಸಿಲುಕುವ ಶ್ರೀರಾಮ ಸೇನೆ ಮುಖಸ್ಥ ಪ್ರಮೋದ್ ಮುತಾಲಿಕ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದಕ್ಕೆ ಸಿಲುಕುವ ಶ್ರೀರಾಮ ಸೇನೆ ಮುಖಸ್ಥ ಪ್ರಮೋದ್ ಮುತಾಲಿಕ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಗೌರಿ ಲಂಕೇಶ್ ಹತ್ಯೆಗೂ ಪ್ರಧಾನಿ ಮೋದಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.
ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಶ್ರೀರಾಮಸೇನೆಯ ಪಾತ್ರವಿಲ್ಲ. ಹತ್ಯೆ ಪ್ರಕರಣದಲ್ಲಿ ಹಿಂದೂಪರ ಸಂಘಟನೆಯ ಕೈವಾಡವಿದೆ ಎಂದು ಆರೋಪಿಸಲಾಗುತ್ತಿದೆ. ಗೌರಿ ಹತ್ಯೆ ಪ್ರಕರಣವನ್ನು ಪರೋಕ್ಷವಾಗಿ ಹಿಂದೂ ಸಂಘಟನೆಗಳ ಮೇಲೆ ಹೇರುವ ಹುನ್ನಾರ ನಡೆದಿದ್ದು, ಇದು ಸರಿಯಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಟೀಕೆ ಮಾಡುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದ ಮುತಾಲಿಕ್, ಗೌರಿ ಲಂಕೇಶ್ ಹತ್ಯೆಗೂ ಪ್ರಧಾನಿ ಮೋದಿಗೂ ಏನು ಸಂಬಂಧ. ಗೌರಿ ಹತ್ಯೆ ನಡೆದಿರುವುದು ಕರ್ನಾಟಕದಲ್ಲಿ. ರಾಜ್ಯ ಸರ್ಕಾರ ಏನು ಸತ್ತಿತ್ತೆ. ರಾಜ್ಯಗಳಲ್ಲಾಗುವ ಹತ್ಯೆಗಳಿಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯೇ ಹೊಣೆಯಾದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕದಲ್ಲಿ 2 ಮತ್ತು ಮಹಾರಾಷ್ಟ್ರದಲ್ಲಿ 2 ಒಟ್ಟು ನಾಲ್ಕು ಹತ್ಯೆಗಳಾದವು. ಆಗ ಯಾರೂ ಈ ಬಗ್ಗೆ ಮಾತನಾಡಲಿಲ್ಲ ಏಕೆ.
ಕರ್ನಾಟಕದಲ್ಲಿ ಒಂದು ನಾಯಿ ಸತ್ತರೂ ಅದಕ್ಕೆ ಪ್ರಧಾನಿ ಮೋದಿ ಹೊಣೆಯೇ ಎಂದು ಮುತಾಲಿಕ್ ಕಿಡಿಕಾರಿದ್ದಾರೆ.
ವಿವಾದದ ಬಳಿಕ ಸ್ಪಷ್ಟನೆ ನೀಡಿದ ಮುತಾಲಿಕ್
ಇನ್ನು ತಮ್ಮ ಹೇಳಿಕೆ ಕುರಿತಂತೆ ವಿವಾದ ಸೃಷ್ಟಯಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಮುತಾಲಿಕ್, ತಾವು ಗೌರಿ ಲಂಕೇಶ್ ಹತ್ಯೆಯನ್ನು ನಾಯಿಗೆ ಹೋಲಿಕೆ ಮಾಡಿಲ್ಲ. ಆದರೆ ಕರ್ನಾಟಕದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ಪ್ರಧಾನಿ ಮೋದಿ ಹೇಗೆ ಕಾರಣರಾಗುತ್ತಾರೆ ಎಂದು ಪ್ರಶ್ನಿಸಿದ್ದೆಯಷ್ಟೇ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com