ಶಶಿಕಲಾಗೆ ಕಾನೂನಿನಂತೆ ಏನು ಸೌಲಭ್ಯ ಕೊಡಬಹುದೋ ಅದನ್ನು ಕೊಡಿ ಎಂದಿದ್ದೆ: ಸಿಎಂ ಸಿದ್ದರಾಮಯ್ಯ

ಶಶಿಕಲಾಗೆ ಕಾನೂನಿನಂತೆ ಏನು ಸೌಲಭ್ಯ ಕೊಡಬಹುದೋ ಅದನ್ನು ಕೊಡಿ ಎಂದು ಹೇಳಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಸಿಎಂ ಆದೇಶದಂತೆ ವಿಶೇಷ ಸೌಲಭ್ಯ ನೀಡಲಾಗಿತ್ತು ಎಂಬ ನಿವೃತ್ತ ಡಿಜಿಪಿ ಸತ್ಯನಾರಾಯಣ ರಾವ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಶಶಿಕಲಾಗೆ ಕಾನೂನಿನಂತೆ ಏನು ಸೌಲಭ್ಯ ಕೊಡಬಹುದೋ ಅದನ್ನು ಕೊಡಿ ಎಂದು ಹೇಳಿದ್ದೆ ಎಂದು ಹೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಭ್ರಷ್ಟಾಚಾರ ಮತ್ತು ಅಕ್ರಮಕ್ಕೆ ಸಂಬಂಧಿಸಿದಂತೆ ಡಿಐಜಿ ರೂಪಾ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ನೀಡಿದ್ದ ನಿವೃತ್ತ ಡಿಐಜಿ ಸತ್ಯನಾರಾಯಣ ರಾವ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾ ಅವರಿಗೆ ಕಾಟ್, ಬೆಡ್, ತಲೆದಿಂಬು ಇತ್ಯಾದಿ ಸೌಲಭ್ಯಗಳನ್ನು ಒದಗಿಸಿದ್ದೆ ಎಂದು ಹೇಳಿದ್ದರು.
ಸತ್ಯನಾರಾಯಣರಾವ್ ಅವರ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಇತ್ತ ಈ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ‘ತಮಿಳುನಾಡಿನಿಂದ ಬಂದ ನಿಯೋಗವೊಂದು ನನ್ನ ಬಳಿ ಶಶಿಕಲಾಗೆ ಕನಿಷ್ಠ ಸೌಲಭ್ಯವನ್ನೂ ಜೈಲಿನಲ್ಲಿ ನೀಡಲಾಗಿಲ್ಲ ಎಂದಿತ್ತು. ಹೀಗಾಗಿ ಡಿಜಿಪಿ ಸತ್ಯನಾರಾಯಣ ರಾವ್ ರನ್ನು ಕರೆದು ಜೈಲಿನ ಮ್ಯಾನ್ಯುವಲ್ ಪ್ರಕಾರ ಏನು ಸೌಲಭ್ಯ ಕೊಡಬಹುದೋ ಅದನ್ನು ಕೊಡಬಹುದು ಎಂದಿದ್ದೆ ಅಷ್ಟೇ. ವಿಶೇಷ ಸೌಲಭ್ಯ ಕೊಡಿ ಎಂದಿಲ್ಲ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಹಿಂದೆ ಶಶಿಕಲಾಗೆ ಜೈಲಿನಲ್ಲಿ ಸೌಲಭ್ಯ ನೀಡಲು 2 ಕೋಟಿ ರೂಪಾಯಿ ಲಂಚ ಪಡೆಯಲಾಗಿದೆ ಇದರಲ್ಲಿ ಸತ್ಯನಾರಾಯಣ ರಾವ್ ಅವರ ಪಾತ್ರವಿದೆ ಎಂದು ರೂಪಾ ಆರೋಪಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಆರೋಪದ ಬಗ್ಗೆ ತನಿಖೆ ನಡೆಸಲು ಐಎಎಸ್ ಅಧಿಕಾರಿ ವಿಜಯ್ ಕುಮಾರ್ ನೇತೃತ್ವದಲ್ಲಿ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com