ಕಾವೇರಿ ತೀರ್ಪು ಪ್ರಶ್ನಿಸಿ 'ಸುಪ್ರೀಂ'ಗೆ ಕರ್ನಾಟಕ ಮರು ಪರಿಶೀಲನಾ ಅರ್ಜಿ?

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಕುರಿತು ಮರುಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಎಂಬಿ ಪಾಟೀಲ್ (ಸಂಗ್ರಹ ಚಿತ್ರ)
ಸಿಎಂ ಸಿದ್ದರಾಮಯ್ಯ ಹಾಗೂ ಎಂಬಿ ಪಾಟೀಲ್ (ಸಂಗ್ರಹ ಚಿತ್ರ)
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಕುರಿತು ಮರುಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ವರದಿಯೊಂದರ ಅನ್ವಯ ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ಆದೇಶಿಸಿರುವುದು, ತಮಿಳುನಾಡಿನಲ್ಲಿ ಅಂತರ್ಜಲ ಮಟ್ಟವನ್ನು ಕಡಿಮೆ ಪ್ರಮಾಣದಲ್ಲಿ ಗುರುತಿಸಿರುವುದು ಮತ್ತು ತಮಿಳುನಾಡು ಕಾವೇರಿ ಕೊಳ್ಳ ವ್ಯಾಪ್ತಿ ಯಲ್ಲಿ ನೀರಾವರಿ ಬೆಳೆ ಪ್ರದೇಶವನ್ನು ಸುಮಾರು 10 ಸಾವಿರ ಎಕರೆ ಹೆಚ್ಚಾಗಿ ಪ್ರಸ್ತಾವಿಸಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್ ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಕೆ ಮುಂದಾಗಿದೆ ಎನ್ನಲಾಗಿದೆ.
ಇದೇ ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ "ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದ್ದು, ಸಭೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ವಿಪಕ್ಷ ಮುಖಂಡರು, ಕಾವೇರಿ ಜಲಾನಯನ ಪ್ರದೇಶದ ಶಾಸಕರು, ಸಂಸದರು ಪಾಲ್ಗೊಳ್ಳಲ್ಲಿದ್ದಾರೆ. ಈ ವೇಳೆ ಸಭೆಯಲ್ಲಿ ಈ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಪ್ರಮುಖವಾಗಿ ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವುದು ಕಡ್ಡಾಯ ಎಂದು ಕೇಂದ್ರಕ್ಕೆ ಸೂಚಿಸಿದೆ. ಈ ರೀತಿಯಾದರೆ ಕಾವೇರಿ ನದಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿರುವ ಜಲಾಶಯಗಳ ಹಕ್ಕು ರಾಜ್ಯದ ಕೈಯಿಂದ ತಪ್ಪಿ ಹೋಗುತ್ತದೆ. ಅಲ್ಲದೆ ಮಳೆ ಕೊರತೆ ಸಂದರ್ಭದಲ್ಲಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಿಗದಿತ ಸೂತ್ರವಿಲ್ಲದ ಕಾರಣ ಮಳೆ ಸಮಸ್ಯೆ ಆದಾಗ ರಾಜ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದು ರಾಜ್ಯದ ವಾದವಾಗಿದೆ. ಇದೇ ವಾದವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ತನ್ನ ಹಕ್ಕೊತ್ತಾಯ ಮಾಡಲಿದೆ ಎನ್ನಲಾಗಿದೆ.
ಮಾರ್ಚ್ 9ರಂದು ದೆಹಲಿಯಲ್ಲಿ  ಸಭೆ
ಈ ಮಧ್ಯೆ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಕುರಿತು ಚರ್ಚಿಸಲು ಮಾರ್ಚ್ 9ರಂದು ಕಾವೇರಿ ಕೊಳ್ಳದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆಯನ್ನು ಕೇಂದ್ರ ಸರ್ಕಾರ ಕರೆದಿದೆ.  ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಈ ಸಭೆ ಕರೆದಿದ್ದು, ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಸಹಿತ ತೀರ್ಪಿನ ವಿವಿಧ ಅಂಶಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಉಪೇಂದ್ರ ಪ್ರಸಾದ್‌ ಸಿಂಗ್‌ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಆದರೆ ಸದ್ಯಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕಷ್ಟಸಾಧ್ಯ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com