ನಲಪಾಡ್ ಹಲ್ಲೆ ಪ್ರಕರಣ: ಮಲ್ಯ ಆಸ್ಪತ್ರೆಯ ಡಾ.ಆನಂದ್‌ಗೆ ವಿವರಣೆ ಕೇಳಿ ಸಿಸಿಬಿ ನೋಟೀಸ್

ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ವಿವರ ನೀಡಿದ ಮಲ್ಯ ಆಸ್ಪತ್ರೆ ವೈದ್ಯ ಡಾ. ಆನಂದ್ ವಿರುದ್ಧ ಸಿಸಿಬಿ ಪೊಲೀಸರು ಗರಂ ಆಗಿದ್ದು ವಿವರ ಕೋರಿ ನೋಟಿಸ್ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

 ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ವಿವರ ನೀಡಿದ ಮಲ್ಯ ಆಸ್ಪತ್ರೆ ವೈದ್ಯ ಡಾ. ಆನಂದ್ ವಿರುದ್ಧ ಸಿಸಿಬಿ ಪೊಲೀಸರು ಗರಂ ಆಗಿದ್ದು ವಿವರ ಕೋರಿ ನೋಟಿಸ್ ನೀಡಿದ್ದಾರೆ.

ಶಾಸಕ ಎನ್‌ಎ ಹ್ಯಾರಿಸ್ ಪುತ್ರ ನಲಪಾಡ್‌ನಿಂದ ಹಲ್ಲೆಗೊಳಗಾದ ವಿದ್ವತ್‌ಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಮನೆಗೆ ಕಳುಹಿಸುವ ವೇಳೆ ನೀಡುವ ಆರೋಗ್ಯದ ವಿವರವನ್ನು (ಡಿಸ್ಚಾರ್ಜ್ ಸಮ್ಮರಿ) ಡಾ.ಆನಂದ್ ತನಿಖಾಧಿಕಾರಿಗಳಿಗೆ ನೀಡುವ ಮುನ್ನವೇ ಮಾಧ್ಯಮಗಳಿಗೆ ಬಹಿರಂಗ ಪಡಿಸಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ಮಲ್ಯ ಆಸ್ಪತ್ರೆ ವೈದ್ಯ ಡಾ.ಆನಂದ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ
ತನಿಖಾಧಿಕಾರಿಗೆ ಸಿಗದ ವಿದ್ವತ್ ಡಿಸ್ಚಾರ್ಜ್ ವರದಿ ಆರೋಪಿಯ ತಂದೆ ಶಾಸಕ ಹ್ಯಾರಿಸ್‌ಗೆ ಸಿಕ್ಕಿದ್ದು ಹೇಗೆ? ಸಾಮಾಜಿಕ ಜಾಲ ತಾಣಗಳಲ್ಲಿ ಬಹಿರಂಗ ಗೊಂಡಿವುದು ಹೇಗೆ? ಎಂದು ಪ್ರಶ್ನಿಸಿ ಸಿಸಿಬಿ ಅಧಿಕಾರಿಗಳು ನೋಟೀಸ್ ಜಾರಿಗೊಳಿಸಿ ಸೂಕ್ತ ಉತ್ತರ ನೀಡುವಂತೆ ಸೂಚಿಸಿದ್ದಾರೆ. 
ಈ ಬಗ್ಗೆ ಮಾಹಿತಿ ನೀಡಿದ ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸತೀಶ್‌ಕುಮಾರ್ ಅವರು, "ಡಿಸ್ಚಾರ್ಜ್ ವರದಿಯನ್ನು ನೀಡುವಂತೆ ಪ್ರಕರಣo ತನಿಖೆ ನಡೆಸುತ್ತಿರುವ ತನಿಖಾಧಿಕಾರಿಯು ಕೇಳಿದ್ದರೂ ಅವರಿಗೆ ಮುಚ್ಚಿದ ಲಕೋಟೆಯನ್ನು ತಲುಪಿಸದೇ ಸಾಮಾಜಿಕ ಜಾಲ ತಾಣಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಡಾ.ಆನಂದ್ ಅವರ ಉತ್ತರ ನೋಡಿಕೊಂಡು ಎಫ್‌ಐಆರ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಹೈಕೋರ್ಟ್‌ನಲ್ಲಿ ನಿನ್ನೆ ನಲಪಾಡ್ ಜಾಮೀನು ಅರ್ಜಿಯ ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ಯಾಂ ಸುಂದರ್ ಅವರು ವಿದ್ವತ್ ಡಿಸ್ಚಾರ್ಜ್ ವರದಿ ಬಹಿರಂಗಗೊಳ್ಳಲು ಡಾ. ಆನಂದ್ ಅವರೇ ಕಾರಣರಾಗಿದ್ದಾರೆ ಎಂದು ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮತ್ತು ವೈದ್ಯರ ಹೆಸರು ಸೂಚಿಸಿ ನೋಟಿಸ್ ಜಾರಿ ಮಾಡಲು ಆದೇಶಿಸಲಾಗಿದ್ದು, ಅದರಂತೆ ಸಿಸಿಬಿ ಅಧಿಕಾರಿಗಳು ನೋಟೀಸ್ ಜಾರಿ ಮಾಡಿ ಮೂರು ದಿನಗಳ ಕಾಲಾವಕಾಶ ನೀಡಿದ್ದಾರೆ. ಅಂತೆಯೇ ಸೋಮವಾರದ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಡಿಸ್ಚಾರ್ಜ್ ವರದಿಯನ್ನು ಮುಖ್ಯ ವೈದ್ಯಾಧಿಕಾರಿ ಬರೆಯಬೇಕಿದ್ದರೂ ಡಾ. ಆನಂದ್ ಇದನ್ನು ಬರೆದಿದ್ದಾರೆ. ಅಲ್ಲದೇ ಅವರು ಆಸ್ಪತ್ರೆಯಲ್ಲಿ ಗಲಾಟೆಯಾಗಿಲ್ಲ, ವಿದ್ವತ್ ನಾಟಕ ಆಡ್ತಿದ್ದಾನೆ ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ರೋಗಿಯ ಅರೋಗ್ಯ ಸ್ಥಿತಿಯನ್ನಷ್ಟೇ ಬರೆಯೋದು ಬಿಟ್ಟು ರೋಗಿಯ ಬೇರೆಲ್ಲಾ ವಿಚಾರ ಬರೆದಿರುವುದರಿಂದ ವೈಯುಕ್ತಿಕ ಹಿತಾಸಕ್ತಿ ಸಾಬೀತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com