ಬೆಂಗಳೂರು: ಕಟ್ಟಡದ ಪ್ಲ್ಯಾನ್ ಮಂಜೂರಾತಿ ಪ್ರಕ್ರಿಯೆ ಈಗ ಸುಲಭ

ಕಟ್ಟಡ ಯೋಜನೆ ಮಂಜೂರಾತಿ ಪ್ರಕ್ರಿಯೆ ಸುಲಭಗೊಳಿಸಲು ಹಾಗೂ ನಾಗರಿಕರಿಗೆ ಹೆಚ್ಚಿನ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಆನ್ ಲೈನ್ ತಂತ್ರಾಂಶವೊಂದನ್ನು ಅನಾವರಣಗೊಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಟ್ಟಡ ಯೋಜನೆ ಮಂಜೂರಾತಿ ಪ್ರಕ್ರಿಯೆ ಸುಲಭಗೊಳಿಸಲು ಹಾಗೂ ನಾಗರಿಕರಿಗೆ ಹೆಚ್ಚಿನ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಆನ್ ಲೈನ್ ತಂತ್ರಾಂಶವೊಂದನ್ನು  ಅನಾವರಣಗೊಳಿಸಿದೆ.

ವಿನೂತನ ಎಬಿಪಿಎಎಸ್  ತಂತ್ರಾಂಶ ಏ.1ರಿಂದ ಕಾರ್ಯಾಚರಣೆ ಮಾಡಲಿದೆ. ಇದರ ಮೂಲಕ ನಾಗರಿಕರು ಕಟ್ಟಡ ಯೋಜನೆ ಮಂಜೂರಾತಿ ಪಡೆಯಬಹುದು.ಇದರ ಬ್ರೋಸರ್ ನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಚಾರ್ಜ್ ನಿನ್ನೆ ಬಿಡುಗಡೆ ಮಾಡಿದರು.

ಈ ತಂತ್ರಾಂಶದಲ್ಲಿ ನಾಗರಿಕರು ಮೊದಲು ಅರ್ಜಿ ಸಲ್ಲಿಸಿ, ಸಂಬಂಧಿತ ದಾಖಲಾತಿಗಳನ್ನು ಅಳವಡಿಸಬೇಕು. ನಂತರ ವಿವಿಧ ಹಂತದ ಆರು ಮಂದಿ ಬಿಬಿಎಂಪಿ ಅದಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡಲಿದ್ದಾರೆ.

ಪ್ರತಿಯೊಬ್ಬ ಅಧಿಕಾರಿಗೂ ಅನುಮೋದನೆ ನೀಡಲು ದಿನ ನಿಗದಿಪಡಿಸಲಾಗಿದೆ. ಒಟ್ಟಾರೆ 30 ದಿನಗಳೊಳಗೆ ಬಿಬಿಎಂಪಿ  ಅನುಮತಿ ದೊರೆಯಲಿದೆ. ಈ ಅವಧಿಯಲ್ಲಿ ಯಾವುದೇ ಅಧಿಕಾರಿ ಯೋಜನೆ ಬಗ್ಗೆ ಸ್ಪಷ್ಟಪಡಿಸದಿದ್ದರೆ ಅದು ಸ್ವಯಂ ಚಾಲಿತವಾಗಿ ಸ್ಥಗಿತಗೊಂಡು ಮುಂದಿನ ಅಧಿಕಾರಿಯ ಬಳಿ ಹೋಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

 ಇದರಿಂದಾಗಿ ನಾಗರಿಕರು ಬಿಬಿಎಂಪಿ ಕಚೇರಿಗೆ ಅಲೆಯುವುದು ತಪ್ಪಿದಂತಾಗಿದ್ದು, ಇದನ್ನು ಪರಿಚಯಿಸಿದ ಅಧಿಕಾರಿಗೆ ಧನ್ಯವಾದ ತಿಳಿಸಿದ ಮಂಜುನಾಥ್ ಪ್ರಸಾದ್, 40 , 60 ಚದರ ಅಡಿಯ ನಿವೇಶನಗಳ ಕಟ್ಟಡಗಳ ಯೋಜನೆ ಮಂಜೂರಾತಿಗಾಗಿ ಮಾತ್ರ ಈ ವಿಧಾನ ಅನ್ವಯವಾಗುತ್ತದೆ ಎಂದರು.

ನೆಲಮಹಡಿಯ ಕಾಮಗಾರಿ ಪೂರ್ಣಗೊಂಡ ನಂತರ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಆರಂಭವಾಗುತ್ತದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ ಏನಾದರೂ ನಿಯಮ ಉಲ್ಲಂಘನೆ ಕಂಡುಬಂದರೆ  ಪ್ರಮಾಣ ಪತ್ರ ನೀಡುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್ ಹೇಳುತ್ತಾರೆ.

ಇದರ ಪ್ರಕ್ರಿಯೆ ಹೇಗೆ
ಮೊದಲು ಬಿಬಿಎಂಪಿ ವೆಬ್ ಸೈಟ್ ನಲ್ಲಿನ  ಎಬಿಪಿಎಎಸ್ ಪೋರ್ಟಲ್ ನಲ್ಲಿ ಬಳಕೆದಾರರು ಐಡಿ ಸೃಷ್ಟಿಸಬೇಕು. ನಂತರ ಕಟ್ಟಡ ಯೋಜನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ , ಸಂಬಂಧಿತ ದಾಖಲೆಗಳನ್ನು ಅಪ್ ಲೋಡ್ ಮಾಡಿ ಪರಿಶೀಲನಾ ಶುಲ್ಕವನ್ನು ಸಂದಾಯ ಮಾಡಬೇಕು.

ಈ ಪ್ರಸ್ತಾವನೆಯನ್ನು ಏಳು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿ,ಬಿಬಿಎಂಪಿ ತಂತ್ರಾಂಶದಿಂದ ಪರಿಶೀಲಿಸಿ ಅರ್ಜಿದಾರರ ಗಮನಕ್ಕೆ ತರಲಾಗುತ್ತದೆ.

ಅರ್ಜಿಯ ಪರಿಶೀಲನೆ ಮುಗಿದ ನಂತರ ಎಸ್ ಎಂಎಸ್ ಮತ್ತು ಇ-ಮೇಲ್ ನಲ್ಲಿ ಮಾಹಿತಿ ತಿಳಿಸಲಾಗುತ್ತದೆ. ನಂತರ  ನೀಡಿರುವ  ಮಂಜೂರಾತಿಯಂತೆ ಕಟ್ಟಡ ನಿರ್ಮಾಣ ಪ್ರಕ್ರಿಯೆ ಆರಂಭಿಸಬಹುದು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com