ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ, ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದು ಪತ್ತೆ

ರಾಜ್ಯ ಸರ್ಕಾರಿ ನೌಕರರ ಮನೆಗಳ ಮೇಲೆ ನಾಲ್ಕು ದಿನಗಳಿಂದ ದಾಳಿ ನಡೆಸುತ್ತಿರುವ ಭ್ರಷ್ಠಾಚಾರ ನಿಗ್ರಹ ದಳ (ಎಸಿಬಿ) ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ, ಇತರೆ ಆಕ್ರಮ ಆಸ್ತಿ, ನಗದನ್ನು ಪತ್ತೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮನೆಗಳ ಮೇಲೆ ನಾಲ್ಕು ದಿನಗಳಿಂದ ದಾಳಿ ನಡೆಸುತ್ತಿರುವ ಭ್ರಷ್ಠಾಚಾರ ನಿಗ್ರಹ ದಳ (ಎಸಿಬಿ)  ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ, ಇತರೆ ಆಕ್ರಮ ಆಸ್ತಿ, ನಗದನ್ನು ಪತ್ತೆ ಮಾಡಿದೆ. ಮಾರ್ಚ್ 20 ರಂದು ಪ್ರಾರಂಭವಾದ ದಾಳಿ ಇಂದಿಗೂ ಮುಂದುವರಿದಿದ್ದು ಇನ್ನೂ ಹೆಚ್ಚು ಅಕ್ರಮ ಸ್ವತ್ತುಗಳು ಸಿಕ್ಕುವ ಸಾಧ್ಯತೆ ಇದೆ ಎಂದು ಎಸಿಬಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಬೀದರ್ ನ ಹುಮನಾಬಾದ್ ಕಾರಂಜ ಕಾಲುವೆ ಯೋಜನೆ ಉಪ ವಿಭಾಗದ ಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ವಿಜಯಕುಮಾರ್ ಮಾಶೆಟ್ಟಿ ಅವರ ಮನೆಯಲ್ಲಿ ಎಸಿಬಿ 4.99 ಕೆಜಿ ಚಿನ್ನ, 9.49 ಕೆಜಿ ಬೆಳ್ಳಿ, 52.74 ಲಕ್ಷ ಬ್ಯಾಂಕ್ ಡೆಪಾಸಿಟ್ ಗಳು, 47.02 ರೂ ನಗದು ಮತ್ತು 27.99 ಲಕ್ಷ ರೂ ಮೌಲ್ಯದ ಗೃಹಬಳಕೆ ಪೀಠೋಪಕರಣಗಳನ್ನು ಪತ್ತೆ ಮಾಡಿದೆ. ಇವರ ಹೆಸರಲ್ಲಿ ಎರಡು ಮನೆಗಳು, ಹತ್ತು ಫ್ಲ್ಯಾಟ್ ಗಳಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದಾರೆ.ಅಲ್ಲದೆ ಅವರ ಬಳಿ ಬೋಲೆರೋ ಜೀಪ್ ಮತ್ತು ಎರಡು ದ್ವಿಚಕ್ರ ವಾಹನಗಳಿದೆ ಎಂದೂ ತಿಳಿದುಬಂದಿದೆ.
ಇನ್ನೊಂದು ಪ್ರಕರಣದಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ದಿ ಜಂಟಿ ನಿರ್ದೇಶಕ ಗೋಪಾಲಕೃಷ್ಣ  ಅವರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು 1.760 ಕಿ.ಗ್ರಾಂ ಚಿನ್ನ ಹಾಗೂ ಬ್ಯಾಂಕ್ ನಲ್ಲಿರುವ 48.59 ಲಕ್ಷ ರೂ ಠೇವಣಿಯನ್ನು ಪತ್ತೆ ಮಾಡಿದ್ದಾರೆ. ಅಲ್ಲದೆ ಗೋಪಾಲಕೃಷ್ಣ ಬಳಿ ಎರಡು ಮನೆಗಳು, ಮೂರು ಸೈಟ್, ಒಂದು ಸ್ವಿಫ್ಟ್ ಕಾರ್ ಮತ್ತು ಎರಡು ಬೈಕುಗಳು ಸೇರಿದೆ ಎಂದು ಅಧಿಕಾರಿಗಳು ಹೇಳಿದರು. 
ಬೆಳಗಾವಿಯ ಮಹಾನಗರಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ಕಿರಣ್ ಸುಬ್ಬರಾವ್ ಭಟ್ ಅವರ ನಿವಾಸದ ಮೇಲೆ ದಾಳಿ ಮಾಡಿದ ಎಸಿಬಿ 1.261 ಕೆಜಿ ಚಿನ್ನ 5.826 ಕೆಜಿ ಬೆಳ್ಳಿ, ವಿವಿಧ ಬ್ಯಾಂಕ್ ಖಾತೆಗಳಲ್ಲಿ 37.11 ಲಕ್ಷ ರೂ. ನಗದು, ಬೆಂಗಳೂರಿನಲ್ಲಿ ಎರಡು ಫ್ಲ್ಯಾಟ್ ಗಳು, ಬೆಳಗಾವಿಯಲ್ಲಿ ಫ್ಲ್ಯಾಟ್ ಹಾಗೂ ಮನೆ, ಹೊಂಡಾ ಜಾಝ್ ಕಾರು ಮತ್ತು ಎರಡು ದ್ವಿಚಕ್ರ ವಾಹನಗಳನ್ನು  ಪತ್ತೆ ಮಾಡಿದೆ.
ತುಮಕೂರು ಉಪ ವಿಬಾಗದ ಸಹಾಯಕ ಕಮಿಷನರ್,ತಿಪ್ಪೆಸ್ವಾಮಿ ಎರಡು ಮನೆಗಳು,  24 ಸೈಟ್ ಗಳು, ಬೆಂಗಳೂರಿನಲ್ಲಿ ಒಂದು ಫ್ಲಾಟ್, 495 ಗ್ರಾಂ ಚಿನ್ನ, 1.914 ಕಿ.ಗ್ರಾಂ ಬೆಳ್ಳಿ, ಇನ್ನೊವಾ ಕಾರು, ಸ್ವಿಫ್ಟ್ ಕಾರ್ ಮತ್ತು ಎರಡು ಬೈಕುಗಳುನ್ನು ಹೊಂದಿದ್ದಾರೆ. ಅಲ್ಲದೆ ಅವರ ಖಾತೆಯಲ್ಲಿ 17.33 ಲಕ್ಷ ರೂ.ನಗದು ಇದ್ದು 11.82 ಲಕ್ಷ ಮೌಲ್ಯದ ಗೃಹಬಳಕೆಯ ವಸ್ತುಗಳು.ಇವರಲ್ಲಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.
ಕಲಬುರ್ಗಿಯ ಎನ್ ಇ ಕೆ ಎಸ್ ಆರ್ ಟಿಸಿ ಯ ಭದ್ರತೆ, ವಿಜಿಲೆನ್ಸ್ ವಿಭಾಗದ ಉಪ ಮುಖ್ಯಾಧಿಕಾರಿ ಶ್ರೀಪತಿ ದೊಡ್ಡಲಿಂಗಣ್ಣನವರ್ ಅವರ ಮನೆಗೆ ದಾಳಿ ನಡೆಸಿದ ವೇಳೆ ಅವರು 13.58 ಎಕರೆ ಕೃಷಿ ಭೂಮಿ, ಇದ್ದು ಬೆಳಗಾವಿಯಲ್ಲಿ 32.17 ಎಕರೆ ಕೃಷಿ ಭೂಮಿ ಖರೀದಿಗಾಗಿ ಅವರು ಮುಂಗಡ ಹಣ ನೀಡಿದ್ದಾರೆ ಎನ್ನುವುದು ಪತ್ತೆಯಾಗಿದೆ. ಒಂದು ಮನೆ, ಹತ್ತು ಸೈಟ್ ಗಳನ್ನು ಹೊಂದಿರುವ ಇವರ ಬ್ಯಾಂಕ್ ಖಾತೆಯಲ್ಲಿ 12.47 ಲಕ್ಷ ರೂ. ಹಣ ಇದೆ.
ಚಿಕ್ಕಮಗಳೂರು ಕಳಸಾ ಹೋಬಳಿ ಕಂದಾಯ ಇನ್ಸ್ ಪೆಕ್ಟರ್ ಕೀರ್ತಿ ಜೈನ್, ಕಳಸದಲ್ಲಿ 9.34 ಎಕರೆ ಭೂಮಿ, ಎರಡು ಕಾರುಗಳನ್ನು ಹೊಂದಿದ್ದು ಎಸಿಬಿ ದಾಳಿಯ ವೇಳೆ ಸ್ವಾಧೀನಕ್ಕೆ ಪಡೆಯಲಾಗಿದೆ. ಭ್ರಷ್ಠಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಈ ಎಲ್ಲಾ ಅಧಿಕಾರಿಗಳ ವಿರುದ್ಧ ದಾಖಲಿಸಲಾಗಿದೆ ಎಂದು ಎಸಿಬಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com