ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ, ಮೇಲ್ವಿಚಾರಕನಿಗೆ ಗೂಸಾ
ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ತಪಾಸಣೆಯ ನೆಪದಲ್ಲಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಕೋಣೆಯ ಮೇಲ್ವಿಚಾರಕನಿಗೆ ಪೋಷಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ...
ಕಲಬುರಗಿ; ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ತಪಾಸಣೆಯ ನೆಪದಲ್ಲಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಕೋಣೆಯ ಮೇಲ್ವಿಚಾರಕನಿಗೆ ಪೋಷಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಶಕೀಲ್ ರಿಜ್ವಾನ್ ಥಳಿತಕ್ಕೊಳಗಾದ ವ್ಯಕ್ತಿಯಾಗಿದ್ದಾನೆ. ಕಲಬುರಗಿ ಜಿಲ್ಲೆಯ ಅಜಾದ್ ಪುರದಲ್ಲಿರುವ ಸೆಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ರಿಜ್ವಾನ್ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಪರೀಕ್ಷೆ ಸಂದರ್ಭದಲ್ಲಿ ಕೊಠಡಿಗೆ ಬರುತ್ತಿದ್ದ ರಿಜ್ವಾನ್ ಅವರು ತಪಸಣೆಯ ನೆಪದಲ್ಲಿ ವಿದ್ಯಾರ್ಥಿನಿಯರ ಅಂಗಾಂಗಗಳನ್ನು ಮುಟ್ಟಿತ್ತಿದ್ದ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.
ಶಾಲೆಯಲ್ಲಿ ಇಂಗ್ಲೀಷ್ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ರಿಜ್ವಾನ್ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಈ ದೃಶ್ಯಾವಳಿಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿನಿಯರು ಘಟನೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತೀವ್ರವಾಗಿ ಆಕ್ರೋಶಗೊಂಡ ಪೋಷಕರು ರಿಜ್ವಾನ್ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಸ್ಥಳದಿಂದ ಓಡಿ ಹೋಗಲು ಮುಂದಾದ ರಿಜ್ವಾನ್ ವಿದ್ಯಾರ್ಥಿನಿಯರನ್ನು ಡಿಬಾರ್ ಮಾಡುವುದಾಗಿ ಬೆದರಿಕೆ ಹಾಕಿ ಸ್ಥಳದಲಿಂದ ಕಾಲ್ಕಿತ್ತಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆನಡೆಸಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ವಲಯದ ಶಿಕ್ಷಣಾಧಿಕಾರಿ ಬಿಇ. ಖಾನ್ ಅವರು, ಶಿಕ್ಷಕನ ವಿರುದ್ಧ ಸೂಕ್ತ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ. ಸಾಮೂಹಿಕ ನಕಲು ಮಾಡಲೂ ರಿಜ್ವಾನ್ ಅವರು ಅವಕಾಶ ಮಾಡಿಕೊಟ್ಟಿದ್ದಾರೆಂದು ಹೇಳಿದ್ದಾರೆ.