ಎಸ್ಎಸ್ಎಲ್ ಸಿ ಫಲಿತಾಂಶ: ಎಂಡೋಸಲ್ಫಾನ್ ಪೀಡಿತರಿಂದ ಅತ್ಯುತ್ತಮ ಸಾಧನೆ

ಪ್ರಸಕ್ತ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶ ಹಲವರಲ್ಲಿ ಹೊಸ ಆಶಾಕಿರಣ ಮೂಡಿಸಿದ್ದು, ಹಲವು ಎಂಡೋಸಲ್ಫಾನ್ ಪೀಡಿತ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆಗೈದಿದ್ದಾರೆ.
ಎಂಡೋ ಸಲ್ಫಾನ್ ಪೀಡಿತ ಅಭಿಷೇಕ್
ಎಂಡೋ ಸಲ್ಫಾನ್ ಪೀಡಿತ ಅಭಿಷೇಕ್
ಮಂಗಳೂರು: ಪ್ರಸಕ್ತ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶ ಹಲವರಲ್ಲಿ ಹೊಸ ಆಶಾಕಿರಣ ಮೂಡಿಸಿದ್ದು, ಹಲವು ಎಂಡೋಸಲ್ಫಾನ್ ಪೀಡಿತ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಗೈದಿದ್ದಾರೆ.
ಪುತ್ತೂರು ತಾಲ್ಲೂಕಿನ ಕೋಯಿಲಾದ ಸೇವಾ ಭಾರತಿ ಡೇಕೇರ್ ಸೆಂಟರ್ ನ ಎಂಡೋ ಸಲ್ಫಾನ್ ಪೀಡಿತ ವಿದ್ಯಾರ್ಥಿ ಅಭಿಷೇಕ್ ಬಿವಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.77ರಷ್ಟು ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅಭಿಷೇಕ್ ತೇರ್ಗಡೆಯಾದ ವಿಚಾರ ಇಂಟರ್ ನೆಟ್ ಮೂಲಕ ತಿಳಿಯುತ್ತಿದ್ದಂತೆಯೇ ಸೇವಾ ಭಾರತಿ ಡೇಕೇರ್ ಸೆಂಟರ್ ಸಂಭ್ರಮಾಚರಣೆ ಮಾಡಲಾಗಿದೆ. 
ಸೋಮವಾರ ಬೆಳಗ್ಗಿನಿಂದಲೂ ಸಂಸ್ಥೆಯ ನಿರ್ವಾಹಕಿ ಪಿ ಶಶಿಕಲಾ ಅವರು ಫಲಿತಾಂಶವನ್ನು ಡೌನ್ಲೋಡ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಇಂಟರ್ ನೆಟ್ ನ ತಾಂತ್ರಿಕ ದೋಷದಿಂದಾಗಿ ಡೌನ್ಲೋಡ್ ತಡವಾಗಿತ್ತು. ಬಳಿಕ ಫಲಿತಾಂಶದ ಪ್ರತಿ ಪಡೆದ ಶಶಿಕಲಾ ಅವರು ಸಂಸ್ಥೆಯಲ್ಲಿ ಈ ವಿಚಾರ ತಿಳಿಸುತ್ತಿದ್ದಂತೆಯೇ ಅಲ್ಲಿನ ಸಿಬ್ಬಂದಿ ಸಂಭ್ರಮ ಆಚರಿಸಿದ್ದಾರೆ. ಇನ್ನು ವಿದ್ಯಾರ್ಥಿ ಅಭಿಷೇಕ್ ಎಸ್ ಎಸ್ ಎಲ್ ಸಿ ತೇರ್ಗಡೆಯಾದ ಸೇವಾ ಭಾರತಿ ಡೇಕೇರ್ ಸೆಂಟರ್ ನ ಮೊದಲ ವಿದ್ಯಾರ್ಥಿ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಅಭಿಷೇಕ್ ಸೆರೆಬ್ರಲ್ ಪಾಲ್ಸಿ (ದೇಹದ ಶೇ.75ರಷ್ಟು ಅಂಗದ ಊನ) ಸಮಸ್ಯೆಯಿಂದ ಬಳಲುತ್ತಿದ್ದು, ಕೋಯಿಲಾದ ಎಂಡೋ ಸಲ್ಫಾನ್ ಡೇಕೇರ್ ಸೆಂಟರ್ ನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ತೇರ್ಗಡೆಯಾದ ಮೊದಲ ವಿದ್ಯಾರ್ಥಿಯಾಗಿದ್ದಾರೆ. ಇನ್ನು ಅಭಿಷೇಕ್ ಕನ್ನಡದಲ್ಲಿ 91, ಸಮಾಜ ವಿಜ್ಞಾನದಲ್ಲಿ 89, ಇಂಗ್ಲೀಷ್ ನಲ್ಲಿ 88, ಹಿಂದಿಯಲ್ಲಿ 90, ಗಣಿತದಲ್ಲಿ 54 ಮತ್ತು ವಿಜ್ಞಾನದಲ್ಲಿ 51 ಅಂಕಗಳನ್ನು ಪಡೆದಿದ್ದಾರೆ. 
ಇನ್ನು ಈ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಡೇಕೇರ್ ಸೆಂಟರ್ ನಿರ್ವಾಹಕಿ ಶಶಿಕಲಾ ಅವರು, ಅಭಿಷೇಕ್ ನಿಜಕ್ಕೂ ಪ್ರತಿಭಾನ್ವಿತ ವಿದ್ಯಾರ್ಥಿ. ಆತ ಎಂಡೋ ಸಲ್ಫಾನ್ ಪೀಡಿತವಾಗಿದ್ದರೂ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ರೀತಿಯ ರಿಯಾಯಿತಿ ಅಥವಾ ನೆರವು ನೀಡಿರಲಿಲ್ಲ. ಆತ ಪರೀಕ್ಷೆಯಲ್ಲಿ 450ಕ್ಕೂ ಹೆಚ್ಚು ಅಂಕಗಳಿಸುತ್ತಾನೆ ಎಂದು ಎಣಿಸಿದ್ದೆ. ಆದರೆ ಆತ ನಮ್ಮ ನಿರೀಕ್ಷೆಯನ್ನೂ ಮಿರಿ ಹೆಚ್ಚುವರಿಯಾಗಿ 13 ಅಂಕಗಳನ್ನು ಗಳಿಸಿದ್ದಾನೆ. ಸಾಮಾನ್ಯ ವಿದ್ಯಾರ್ಥಿಗಳ ಮಾದರಿಯಲ್ಲೇ ಆತ ಕೂಡ ಪರೀಕ್ಷೆ ಬರೆದಿದ್ದ. ಈ ಸಾಧನೆ ಮೂಲಕ ತನ್ನ ಅಂಗ ವೈಕಲ್ಯವನ್ನು ಆತ ಮೆಟ್ಟಿ ನಿಂತಿದ್ದಾನೆ ಎಂದು ಹೇಳಿದ್ದಾರೆ. 
ವಿದ್ಯಾರ್ಥಿ ಅಭಿಷೇಕ್ ಗಂಗರತ್ನ ಮತ್ತು ವಸಂತ ಎಂಬ ದಂಪತಿಗಳ ಪುತ್ರನಾಗಿದ್ದು, ರಾಮಕುಂಜಾ ಪ್ರೌಢಶಾಲೆಯಲ್ಲಿ ಸಹಾಯಕರ ನೆರವಿನಿಂದ ಶಾಲೆಗೆ ತೆರಳುತ್ತಿದ್ದ. ಬೆಳ್ತಂಗಿಡಯ ಕೊಕ್ಕಡದಲ್ಲಿ ಅತನ ಮನೆಯಿದ್ದು, ನಿತ್ಯ ಸಹಾಯಕ ನೆರವಿನಿಂದಲೇ ಶಾಲೆಗೆ ಆಗಮಿಸುತ್ತಿದ್ದ. ಇನ್ನು ಅಭಿಷೇಕ್ ನ ಸಹೋದರಿ ತುಳಸಿ ಕೂಡ ಎಂಡೋ ಸಲ್ಫಾನ್ ಪೀಡಿತರಾಗಿದ್ದು, ಕಿವುಡ ಮತ್ತು ಮೂಕರಾಗಿದ್ದಾರೆ. ಆಕೆ ಕೂಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.66ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com