ಸಿಗ್ನಿಲಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ: 32 ನಿಮಿಷ ನಮ್ಮ ಮೆಟ್ರೋ ಸೇವೆ ಸ್ಥಗಿತ

ಬೈಯಪ್ಪನಹಳ್ಳಿ ನಮ್ಮ ಮೆಟ್ರೋ ರೈಲು ನಿಲ್ದಾಣ ಸಮೀಪ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ಸುಮಾರು 32 ನಿಮಿಷಗಳ ಕಾಲ ನಮ್ಮ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡು, ಸಾವಿರಾರು ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು; ಬೈಯಪ್ಪನಹಳ್ಳಿ ನಮ್ಮ ಮೆಟ್ರೋ ರೈಲು ನಿಲ್ದಾಣ ಸಮೀಪ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ಸುಮಾರು 32 ನಿಮಿಷಗಳ ಕಾಲ ನಮ್ಮ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡು, ಸಾವಿರಾರು ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. 
ಸೋಮವಾರ ಬೆಳಿಗ್ಗೆ 10.18ರ ಸುಮಾರಿಗೆ ಬೈಯಪ್ಪನಹಳ್ಳಿ ಮೆಟ್ರೋ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸಿಗ್ನಿಲಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ ಹೊರ ಹೋಗುವ ಮತ್ತು ಒಳ ಬರುವ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಪರಿಣಾಮ ಮೆಟ್ರೋ ರೈಲಿನ ಆರು ಟ್ರಿಪ್ ಗಳು ರದ್ದುಗೊಂಡಿದ್ದವು. 
ಈವಿಷಯ ತಿಳಿಯದ ನೂರಾರು ಪ್ರಯಾಣಿಕರು ಇಂದಿರಾನಗರ, ಬೈಯಪ್ಪನಹಳ್ಳಿ, ಎಂ.ಜಿ.ರಸ್ತೆ ಇತ್ಯಾದಿ ನಿಲ್ದಾಣಗಳಲ್ಲಿ ರೈಲಿಗಾಗಿ ಕಾಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿತ್ತು. 
ನೂರಾರು ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಜಮಾವಣೆಗೊಂಡಿದ್ದರಿಂದ ಗೊಂದಲ ನಿರ್ಮಾಣಗೊಂಡಿತ್ತು. ಕೂಡಲೇ ಮೆಟ್ರೋ ಸಿಬ್ಬಂದಿ ತಾಂತ್ರಿಕ ಅವ್ಯವಸ್ಥೆ ಕುರಿತು ಕುರಿತು ಪ್ರಯಾಣಿಕರಿಗೆ ಮನವರಿಕೆ ಮಾಡಿಕೊಟ್ಟು, ಸಹಕರಿಸುವಂತೆ ನಿರಂತರವಾಗಿ ಧ್ವನಿವರ್ಧಕದ ಮೂಲಕ ಮನವಿ ಮಾಡಿದರು. 
ಮೆಟ್ರೋ ಸೇವೆ ಸ್ಥಗಿತದ ಕಾರಣ ಅನೇಕ ಪ್ರಯಾಣಿಕರು ಆಟೋ, ಟ್ಯಾಕ್ಸಿ, ಬಿಎಂಟಿಸಿ ಬಸ್ ಗಳ ಮೊರೆ ಹೋದರು. ಸಿಗ್ನಲಿಂಗ್ ವ್ಯವಸ್ಥೆಯನ್ನು ಯಾಂತ್ರಿಕವಾಗಿ ಸರಿಪಡಿಸಿದ ಬಳಿಕ 10.57ರಿಂದ ಮತ್ತೆ ನಮ್ಮ ಮೆಟ್ರೋ ಸಂಚಾರ ಪುನರ್ ಆರಂಭಗೊಂಡಿತು. 
ಬೈಯಪ್ಪನಹಳ್ಳಿ ನಿಲ್ದಾಣದ ಸ್ವಲ್ಪ ದೂರ ರೈಲು ಸಂಚಾರ ಸ್ಥಗಿಗೊಳಿಸಿದ್ದರಿಂದ ಸುಮಾರು 158 ಪ್ರಯಾಣಿಕರನ್ನು ರೈಲು ಸಂಖ್ಯೆ 21ರಿಂದ ಪಾದಚಾರಿ ಮಾರ್ಗದ ಮೂಲಕ ಬೈಯಪ್ಪನಹಳ್ಲಿ ಪ್ಲಾಟ್ ಫಾರಂಗೆ ಸುರಕ್ಷಿತವಾಗಿ ಮೆಟ್ರೋ ಸಿಬ್ಬಂದಿ ಕಳುಹಿಸಿಕೊಟ್ಟರು. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ಸ್ಥಗಿತಗೊಂಡಿದ್ದರಿಂದ ಒಂದು ರೈಲು ಸ್ವಾಮಿ ವಿವೇಕಾನಂದ ರೈತು ನಿಲ್ದಾಣದಲ್ಲಿ ಹಾಗೂ ಎರಡು ಇಂದಿರಾನಗರ ನಿಲ್ದಾಣದಲ್ಲಿ ನಿಲ್ಲಬೇಕಾಯಿತು. 
ಸಿಗ್ನಲಿಂಗ್ ವ್ಯವಸ್ಥೆ ಸ್ಥಗಿತಗೊಂಡ ಮಾಹಿತಿ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಕೇವಲ 30 ನಿಮಿಷದಲ್ಲಿ ಸರಿಪಡಿಸಿದರು. 
ಪ್ರಯಾಣಿಕರ ದಟ್ಟಣೆ ತೆರವುಗೊಳಿಸಲು ವಾಣಿಜ್ಯ ಸಂಚಾರವನ್ನು ಇಂದಿರಾನಗರದಿಂದ ಮೈಸೂರು ರಸ್ತೆವರೆಗೆ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ವರೆಗೆ 3 ಶಾರ್ಟ್ ಲೂಪ್ ನಲ್ಲಿ ನಡೆಸಲಾಯಿತು. ಸಿಗ್ನಲಿಂಗ್ ವ್ಯವಸ್ಥೆ ಸ್ಥಗಿತಗೊಂಡ ಕಾರಣ ತಿಳಿಯಲು ಸಂಪೂರ್ಣ ತನಿಖೆ ನಡೆಸಲಾಗುತ್ತದೆ ಎಂದು ಬಿಎಂಆರ್'ಸಿಎಲ್ ವ್ಯವಸ್ಥಾಪಕರು ಮಹೇಂದ್ರ ಜೈನ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com