ದಾವಣೆಗೆರೆಯಲ್ಲೂ ಐಟಿ ದಾಳಿ, ಬಿಜೆಪಿ ಅಭ್ಯರ್ಥಿ ಮನೆಯಲ್ಲಿ ದಾಖಲೆ ಪರಿಶೀಲನೆ

ಬಾದಾಮಿಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಅವರ ರೆಸಾರ್ಟ್ ಮೇಲೆ ಐಟಿ ದಾಳಿ ವಿಚಾರ ಹಸಿರಾಗಿರುವ ಬೆನ್ನಲ್ಲೇ ಇದೀಗ ದಾವಣಗೆರೆಯಲ್ಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ದಾವಣಗೆರೆ: ಬಾದಾಮಿಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಅವರ ರೆಸಾರ್ಟ್ ಮೇಲೆ ಐಟಿ ದಾಳಿ ವಿಚಾರ ಹಸಿರಾಗಿರುವ ಬೆನ್ನಲ್ಲೇ ಇದೀಗ ದಾವಣಗೆರೆಯಲ್ಲೂ ಐಟಿ ಅಧಿಕಾರಿಗಳು ದಾಳಿ  ನಡೆಸಿದ್ದಾರೆ.
ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಆಪ್ತರೆಂದು ಹೇಳಲಾಗುತ್ತಿರುವ ದಾವಣಗೆರೆಯ ಚನ್ನಗಿರಿ ಮಾಜಿ ಶಾಸಕ,‌ ಹಾಲಿ ಬಿಜೆಪಿ ಅಭ್ಯರ್ಥಿ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಕಂದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ‌ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಬೆಳಗಿನ ಜಾವದವರೆಗೂ ಪರಿಶೀಲನೆ ನಡೆಸಿದ್ದಾರೆ. ಐಟಿ ದಾಳಿ ವಿಚಾರ ತಿಳಿಯುತ್ತಿದ್ದಂತೆ ನೂರಾರು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ವಿರೂಪಾಕ್ಷಪ್ಪ ನಿವಾಸದ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. 
ಕಾರ್ಯಕರ್ತರು ವಿರೂಪಾಕ್ಷಪ್ಪ ಅವರನ್ನು ಭೇಟಿ ಮಾಡಲು ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸರು ಅವಕಾಶ ನೀಡಲಿಲ್ಲ ಎನ್ನಲಾಗಿದೆ. ಇನ್ನು ಬಿಜೆಪಿ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಅಚ್ಚರಿ ತಂದಿದ್ದರೂ ಇದು ಕಣ್ಣೊರೆಸುವ ತಂತ್ರ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಶೋಧ ಕಾರ್ಯ ಪೂರ್ಣಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಡಾಳ್ ವಿರೂಪಾಕ್ಷಪ್ಪ, 'ನನ್ನ ಜನಪ್ರಿಯತೆ ಸಹಿಸಲಾರದೆ ವಿರೋಧ ಪಕ್ಷದವರು ದೂರು ನೀಡಿದ್ದಾರೆ. ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಇಂತಹ ಕುತಂತ್ರ ಮಾಡಿದ್ದಾರೆ. ಮೊನ್ನೆ ತಾನೇ ಯಾರೋ ವಾಮಾಚಾರ ಮಾಡಿಸಿದ್ದರು. ಐಟಿ ದಾಳಿ ಪಿತೂರಿ ನಡೆಸಿದ್ದಾರೆ. ನನಗೆ ಜನ ಬೆಂಬಲ, ದೈವ ಬಲ ಇದೆ. ಯಾರು ಏನೇ ಮಾಡಿದರೂ ನಾನೇ ಗೆಲ್ಲೋದು ಎಂದು ಹೇಳಿದರು. ಅಲ್ಲದೆ ಐಟಿ ದಾಳಿ ಎಂದು ತಮ್ಮ ಎದುರಾಳಿ ಕಾಂಗ್ರೆಸ್ ಪಕ್ಷದ ವಡ್ನಾಳ್ ರಾಜಣ್ಣ ಕೈವಾಡವಿದೆ ಎಂದು ಆರೋಪಿಸಿದರು.
ನಿನ್ನೆ ಸಂಜೆ 4 ಗಂಟೆಗೆ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರ್ ಗೆ ದೂರು ನೀಡಿದ್ದು, 5 ಗಂಟೆಗೆ ದೂರನ್ನು ಉಪ ಆಯುಕ್ತರಿಗೆ ರವಾನೆ ಮಾಡಲಾಗಿದೆ. ಸಂಜೆ ಆರು ಗಂಟೆ ವೇಳೆ ನಮ್ಮ ಮನೆಯಲ್ಲಿ ಐಟಿ ದಾಳಿಯಾಗಿದೆ. ಇದು ಐಟಿ ದಾಳಿ ಹಿಂದೆ ಪಿತೂರಿ ಇರುವುದನ್ನು ತೋರಿಸುತ್ತಿದೆ. ಏಳು ಅಧಿಕಾರಿಗಳು ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ ದಾಳಿ ಮಾಡಿದ್ದು, ಮನೆಯಲ್ಲಿ ಏನೂ ಸಿಗದೇ ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ ಎಂದು ವಿರೂಪಾಕ್ಷಪ್ಪ ಹೇಳಿದ್ದಾರೆ.
ಐಟಿ ದಾಳಿ ಪೂರ್ವ ನಿಯೋಜಿತ ಕಾಂಗ್ರೆಸ್ 
ಇನ್ನು ವಿರೂಪಾಕ್ಷಪ್ಪ ಅವರ ಮನೆ ಮೇಲಿನ ಐಟಿ ದಾಳಿಯನ್ನು ಪೂರ್ವ ನಿಯೋಜಿತ ಎಂದು ಕಾಂಗ್ರೆಸ್ ಹೇಳಿದೆ. ರಾಜ್ಯದ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿಗಳ ಮನೆ ಸಂಬಧಿಗಳು, ಆಪ್ತರ ಮನೆ ಮೇಲೆ ದಾಳಿಯಾಗಿದ್ದು, ಐಟಿ ದಾಳಿ ರಾಜಕೀಯ ಪ್ರೇರಿತವಲ್ಲ ಎಂದು ಸಾರುವುದಕ್ಕಾಗಿ ಈ ದಾಳಿ ನಡೆಸಲಾಗಿದೆ. ಈ ದಾಳಿ ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ವಿರೂಪಾಕ್ಷಪ್ಪ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com