ಆರ್ ಆರ್ ನಗರ ವೋಟರ್ ಐಡಿ ಪತ್ತೆ ಪ್ರಕರಣ: ಶಾಸಕ ಮುನಿರತ್ನ ವಿರುದ್ಧ ಎಫ್ ಐಆರ್ ದಾಖಲು

ರಾಜರಾಜೇಶ್ವರಿ ನಗರದ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ವೋಟರ್ ಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಾಜರಾಜೇಶ್ವರಿ ನಗರದ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ವೋಟರ್ ಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ ಪ್ರಸ್ತುತ ರಾಜ್ಯ ಚುನಾವಣಾ ಆಯೋಗ ದಾಖಲಿಸಿರುವ ಎಫ್ ಐಆರ್ ನಲ್ಲಿ 55/18ರ ಅಡಿಯಲ್ಲಿ 14 ಮಂದಿ ವಿರುದ್ಧ ಆರೋಪ ಮಾಡಲಾಗಿದ್ದು, ಈ ಪೈಕಿ ಕಾಂಗ್ರೆಸ್ ಶಾಸಕ ಮುನಿರತ್ನ ಅವರನ್ನು ಪ್ರಕರಣದ 14ನೇ ಆರೋಪಿಯನ್ನಾಗಿ ಮಾಡಲಾಗಿದೆ. ಉಳಿದಂತೆ ವೋಟರ್ ಐಡಿ ಸಿಕ್ಕ ಅಪಾರ್ಟ್ ಮೆಂಟ್ ಮಾಲಕಿ ಮಂಜುಳಾ ನಂಜಮರಿ ಸೇರಿದಂತೆ ಒಟ್ಟು 14 ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. 
ಇದಲ್ಲದೇ ಅಪಾರ್ಟ್ ಮೆಂಟ್ ನಲ್ಲಿ ಸಿಕ್ಕ ಸುಮಾರು 90 ಲಕ್ಷ ರೂ ಮೌಲ್ಯದ ಪರಿಕರಗಳನ್ನು ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ಸಂಬಂಧವೂ ಶಾಸಕ ಮುನಿರತ್ನ ವಿರುದ್ಧ ಪ್ರತ್ಯೇಕ ಎಫ್ ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. ಇನ್ನು ನಿನ್ನೆ ಸ್ಥಳದಲ್ಲಿ ದೊರೆತ ವೋಟರ್ ಐಡಿಗಳ ಮಾದರಿಯನ್ನು ದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗ ಕಚೇರಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ರಾಜ್ಯ ಚುನಾವಣಾ ಉಪ ಆಯುಕ್ತ ಮಹೇಶ್ವರ ರಾವ್ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಅದರಂತೆ ನಿನ್ನೆಯವರೆಗೂ ನಡೆದ ತನಿಖಾ ವರದಿಯನ್ನು ಕೇಂದ್ರ ಆಯೋಗಕ್ಕೆ ರವಾನೆ ಮಾಡಲಾಗಿದ್ದು, ಮೇಲ್ನೋಟಕ್ಕೆ ಕಂಡು ಬಂದ ಅಂಶಗಳ ಉಲ್ಲೇಖಿಸಿ ಸಿದ್ಧಪಡಿಸಲಾದ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ದೆಹಲಿಗೂ ಅಪಾರ್ಟ್ ಮೆಂಟ್ ನಲ್ಲಿ ಸಿಕ್ಕ ವೋಟರ್ ಐಡಿ ಸ್ಯಾಂಪಲ್ ರವಾನೆ ಮಾಡಲಾಗಿದ್ದು, ಆಯೋಗದ ವರದಿಯಲ್ಲಿ ಶಾಸಕ ಮುನಿರತ್ನ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಪ್ರಕರಣ ಸಂಬಂಧ ಕೇಂದ್ರ ಚುನಾವಣಾ ಆಯೋಗ ಇಂದು ತನ್ನ ನಿರ್ಧಾರ ಪ್ರಕಟಿಸಲಿದ್ದು, ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಮುಂದೂಡಬೇಕೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com