ವಿಶ್ವಾಸಮತ ಯಾಚನೆ: ವಿಧಾನಸೌಧಕ್ಕೆ ಪೊಲೀಸ್ ಸರ್ಪಗಾವಲು, ನಿಷೇಧಾಜ್ಞೆ ಜಾರಿ

ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ವಿಧಾನಸೌಧಕ್ಕೆ ಭಾರಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ವಿಧಾನಸೌಧಕ್ಕೆ ಪೊಲೀಸ್ ಸರ್ಪಗಾವಲು
ವಿಧಾನಸೌಧಕ್ಕೆ ಪೊಲೀಸ್ ಸರ್ಪಗಾವಲು
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ವಿಧಾನಸೌಧಕ್ಕೆ ಭಾರಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ವಿಶ್ವಾಸ ಮತ ಯಾಚನೆ ಸಂಬಂಧ ನಿನ್ನೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಭದ್ರತೆ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯದ ಐಜಿ-ಡಿಜಿಪಿ ಅವರಿಗೆ ವಹಿಸಿದೆ. ಹೀಗಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ವಿಧಾನಸೌಧ ಮತ್ತು ವಿಕಾಸ ಸೌಧಕ್ಕೆ ಭಾರಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. 
ಇಂದು ಸಂಜೆ ನಾಲ್ಕು ಗಂಟೆಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲು ಸುಪ್ರೀಂಕೋರ್ಟ್​ ಆದೇಶ ನೀಡಿದ ಹಿನ್ನೆಲೆಯಲ್ಲಿ ವಿಧಾನ ಸೌಧ ಸುತ್ತಮುತ್ತ 2 ಕಿ.ಮೀ.ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬಹುಮತ ಸಾಬೀತಿನ ಜತೆ ಬೆಳಗ್ಗೆ 11 ಗಂಟೆಗೆ 221 ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇನ್ನು ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ನಗರ ಪೊಲೀಸ್​ ಆಯುಕ್ತ ಸುನೀಲ್​ ಕುಮಾರ್​ ಅವರು ವಿಧಾನಸೌಧ ಆವರಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ಹೀಗಾಗಿ ವಿಧಾನಸೌಧ ಆವರಣದಲ್ಲಿ ಯಾರೂ ಕೂಡ ಗುಂಪು ಕಟ್ಟಿ ನಿಲ್ಲುವಂತಿಲ್ಲ. ವಿಧಾನಸೌಧದ ಸುತ್ತಲೂ ಎರಡು ಕಿಮೀ ದೂರದವರೆಗೆ ಯಾರೂ ಗುಂಪಾಗಿ ಇರಬಾರದು ಎಂದು ಆದೇಶ ನೀಡಲಾಗಿದೆ. ಪೊಲೀಸರು ಬೆಳಗ್ಗೆ 6 ಗಂಟೆಯಿಂದಲೇ ಬಂದೋಬಸ್ತ್​ ತಯಾರಿ ನಡೆಸುತ್ತಿದ್ದಾರೆ. ಸದ್ಯ ವಿಧಾನ ಸೌಧ ಸುತ್ತಮುತ್ತ 1600 ಪೊಲೀಸರು ನಿಯೋಜನೆಗೊಂಡಿದ್ದು, ವಿಧಾನಸೌಧದ ಒಳಗೆ ಯಾರನ್ನೂ ಬಿಡುತ್ತಿಲ್ಲ.
ಭದ್ರತೆಗೆ 5 ಡಿಸಿಪಿಗಳ ನೇತೃತ್ವ; 200ಕ್ಕೂ ಅಧಿಕ ಮಫ್ತಿ ಪೊಲೀಸರ ಗಸ್ತು
ಇನ್ನು ಭದ್ರತೆಗಾಗಿ ಐದು ಡಿಸಿಪಿಗಳನ್ನು ನೇಮಕ ಮಾಡಲಾಗಿದ್ದು, 200ಕ್ಕೂ ಅಧಿಕ ಮಫ್ತಿ ಪೊಲೀಸರು ವಿಧಾನಸೌಧ ಒಳಗೆ ಮತ್ತು ಹೊರಗೆ ಗಸ್ತು ತಿರುಗುತ್ತಿದ್ದಾರೆ. 2010ರಲ್ಲಿ ಆದಂತೆ ಗಲಾಟೆ ಆಗಬಹುದು ಎಂಬ ಶಂಕೆ ಮೇರೆಗೆ ಈ ಬಾರಿ ಭಾರಿ ಭಧ್ರತೆ ಒದಗಿಸಲಾಗಿದೆ. ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳಗಳು ವಿಧಾನಸೌಧದ ಒಳ ಮತ್ತು ಹೊರಗಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿವೆ. 
ಭದ್ರತಾ ಸಿಬ್ಬಂದಿಗಳಿಗೆ ಗುರುತಿನ ಚೀಟಿ ಕಡ್ಡಾಯ ಮಾಡಲಾಗಿದ್ದು, ಗುರುತಿನ ಚೀಟಿ ಇಲ್ಲದ ಯಾವುದೇ ಸಿಬ್ಬಂದಿ ಅಥವಾ ಅಧಿಕಾರಿಯನ್ನು ಒಳಗೆ ಬಿಡದಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಇಂದು ವಿಧಾನಸೌಧಕ್ಕೆ  ಸಾರ್ವಜನಿಕ ಪ್ರವೇಶ ಸಂಪೂರ್ಣ ನಿರ್ಬಂಧ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com