ಬ್ಲ್ಯಾಕ್ ಮೇಲ್ ಪ್ರಕರಣ: ಚಿತ್ರ ನಿರ್ದೇಶಕ ಸೇರಿ ನಾಲ್ವರ ಬಂಧನ

ದಂಪತಿಯ ಖಾಸಗಿ ದೃಶ್ಯವನ್ನು ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ 5 ಕೋಟಿ ರೂ. ಸುಲಿಗೆಗೆ ಮುಂದಾಗಿದ್ದ ದುಷ್ಕರ್ಮಿಗಳ ತಂಡವೊಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ದಂಪತಿಯ ಖಾಸಗಿ ದೃಶ್ಯವನ್ನು ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ 5 ಕೋಟಿ ರೂ. ಸುಲಿಗೆಗೆ ಮುಂದಾಗಿದ್ದ ದುಷ್ಕರ್ಮಿಗಳ ತಂಡವೊಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ನಾಲ್ಕು ಜನ ದುಷ್ಕರ್ಮಿಗಳ ತಂಡದಲ್ಲಿ ಚಿತ್ರ ನಿರ್ದೇಶಕನೊಬ್ಬ ಕೂಡ ಇದ್ದು, ಕೆಂಗೇರಿಯ ಸಿನಿಮಾ ನಿರ್ದೇಶಕ ಸಂತೋಷ್ ಕುಮಾರ್ ಅಲಿಯಾಸ್ ವಿಜಯ ಸಂತೋಷ್ (27), ಈತನ ಕಾರು ಚಾಲಕ ಪ್ರಶಾಂತ್ (26), ಸುರೇಶ್ (24) ಮತ್ತು ಪ್ರದೀಪ್ (22) ಎಂಬುವವರನ್ನು ಬೆಂಗಳೂರು ಸಿಸಿಬಿ ಪೊಲೀಸರ ಬಂಧಿಸಿದ್ದಾರೆ.  ಪೊಲೀಸ್ ಮೂಲಗಳ ಪ್ರಕಾರ ಕೆಂಗೇರಿ ಉಪನಗರದ ರಿಯಲ್ ಎಸ್ಟೇಟ್ ಉದ್ಯಮಿ ತನ್ನ ಪತ್ನಿ ಜತೆಗಿದ್ದ ಖಾಸಗಿ ವಿಡಿಯೋ ಕದ್ದು ಆರೋಪಿಗಳು ಅದನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಅವರಿಂದ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರಂತೆ.
ಬೆದರಿಕೆ ಹಿನ್ನಲೆಯಲ್ಲಿ ಉದ್ಯಮಿ ಕೊಟ್ಟ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಕನ್ನಡ, ತೆಲುಗಿನ ಕೆಲ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಸಂತೋಷ್, ಸ್ವತಂತ್ರ ನಿರ್ದೇಶನದಲ್ಲಿ ‘ಮೈಸೂರಲ್ಲಿ ರಾಜಾರಾಣಿ’ ಎಂಬ ಸಿನಿಮಾ ಶುರುಮಾಡಿದ್ದ. ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಆರೋಪಿ ಸಂತೋಷ್ 5 ವರ್ಷಗಳಿಂದ ಪರಿಚಿತರಾಗಿದ್ದು, ಎರಡೂ ಕುಟುಂಬಗಳ ಸದಸ್ಯರು 9 ತಿಂಗಳ ಹಿಂದೆ ಮುಂಬೈಗೆ ಪ್ರವಾಸಕ್ಕೆ ಹೋಗಿದ್ದರು.
ಪ್ರವಾಸದ ಸಮಯದಲ್ಲಿ ಉದ್ಯಮಿ ಮತ್ತು ಸಂತೋಷ್ ಮೊಬೈಲ್ ಫೋನ್​ಗಳಲ್ಲಿ ಪ್ರವಾಸದ ಫೋಟೋ, ವಿಡಿಯೋಗಳನ್ನು ಚಿತ್ರೀಕರಿಸಿದ್ದರು. ಪ್ರವಾಸದ ನಂತರ ಫೋಟೋ, ವಿಡಿಯೋಗಳನ್ನು ವಿನಿಮಯ ಮಾಡಿಕೊಳ್ಳುವ ಸಲುವಾಗಿ ಸಂತೋಷ್, ಉದ್ಯಮಿಯ ಮೊಬೈಲ್ ಫೋನ್ ಪಡೆದಿದ್ದ. ಅದರಲ್ಲಿ ಉದ್ಯಮಿ ದಂಪತಿಯ ಖಾಸಗಿ ವಿಡಿಯೋ ಸಹ ಇತ್ತು. ಪ್ರವಾಸದ ಪೋಟೋ ಜತೆಗೆ ಖಾಸಗಿ ವಿಡಿಯೋವನ್ನು ಸಂತೋಷ್ ತನ್ನ ಮೊಬೈಲ್​ಗೆ ವರ್ಗಾಯಿಸಿಕೊಂಡಿದ್ದನಂತೆ.
ಇದೇ ವಿಡಿಯೋವನ್ನು ಮುಂದಿಟ್ಟುಕೊಂಡು ಉದ್ಯಮಿಗೆ ನಿರ್ದೇಶಕ ಸಂತೋಷ್ ಬೆದರಿಕೆ ಹಾಕುತ್ತಿದ್ದನಂತೆ. 
ಇನ್ನು ನಿರ್ದೇಶಕ ಸಂತೋಷ್ ವಿರುದ್ಧವೂ ಈ ಹಿಂದೆ ಕೊಲೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಆರೋಪಿ ಸಂತೋಷ್​ನನ್ನು ಮೈಸೂರಿನ ನಜರ್ ಬಾದ್ ಪೊಲೀಸರು 2010ರಲ್ಲಿ ಅತ್ತೆ ಕೊಲೆ ಮಾಡಿದ ಆರೋಪದಲ್ಲಿ ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com