'ಮೆಕುನು' ಚಂಡಮಾರುತ: ಮಹಾಮಳೆಗೆ ತತ್ತರಿಸಿದ ಮಂಗಳೂರು, ನೂರಾರು ಮನೆ, ಕಟ್ಟಡಗಳಿಗೆ ಹಾನಿ!
ಗಲ್ಫ್ ರಾಷ್ಡ್ರಗಳಲ್ಲಿ ಬೆಚ್ಚಿ ಬೀಳಿಸಿದ್ದ ಮೆಕುನು ಚಂಡಮಾರುತ ಕರಾವಳಿಯಲ್ಲೂ ತನ್ನ ಆರ್ಭಟ ಮುಂದುವರೆಸಿದ್ದು, ಸೋಮವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಹಾಮಳೆಗೆ ಮಂಗಳೂರು ಮತ್ತು ಕರಾವಳಿ ತತ್ತರಿಸಿ ಹೋಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಮಂಗಳೂರು: ಗಲ್ಫ್ ರಾಷ್ಡ್ರಗಳಲ್ಲಿ ಬೆಚ್ಚಿ ಬೀಳಿಸಿದ್ದ ಮೆಕುನು ಚಂಡಮಾರುತ ಕರಾವಳಿಯಲ್ಲೂ ತನ್ನ ಆರ್ಭಟ ಮುಂದುವರೆಸಿದ್ದು, ಸೋಮವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಹಾಮಳೆಗೆ ಮಂಗಳೂರು ಮತ್ತು ಕರಾವಳಿ ತತ್ತರಿಸಿ ಹೋಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಸೋಮವಾರ ರಾತ್ರಿ ಆರಂಭವಾದ ಮಹಾ ಮಳೆ ಮಂಗಳವಾರವೂ ಮುಂದುವರೆದಿದ್ದು, ಕುಂಭದ್ರೋಣ ಮಳೆಗೆ ಮಂಗಳೂರು ಮಹಾನಗರಿ ತತ್ತರಿಸಿ ಹೋಗಿದೆ. ಮಂಗಳೂರಿನ ಒಳಚರಂಡಿಗಳು, ಹಳ್ಳಗಳು, ರಾಜಾಕಾಲುವೆಗಳು ತುಂಬಿ ಹರಿಯತೊಡಗಿದ್ದು, ಮಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಅಕ್ಷರಶ0 ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಮನೆ-ಅಂಗಡಿಗಳಿಗೆಲ್ಲಾ ನೀರಿನಲ್ಲಿ ಮುಳುಗಿವೆ. ಇನ್ನು ಕುಡ್ಲದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ನಿವಾಸಿಗಳನ್ನು ಕಂಗಾಲಾಗಿದ್ದಾರೆ. ಏತನ್ಮಧ್ಯೆ, ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಸೇರಿದಂತೆ, ವಿವಿಧ ಸಂಘಸಂಸ್ಥೆಗಳ ಸ್ವಯಂಸೇವಕರು ಹಾಗೂ ನಾಗರಿಕರು ತಮ್ಮ ತಮ್ಮ ಪ್ರದೇಶಗಳಲ್ಲಿ ನೆರೆನೀರಿಗೆ ಸಿಲುಕಿದವರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಕೆಲವರು ಸಂಚಾರ ನಿಯಂತ್ರಣ ಕಾರ್ಯದಲ್ಲೂ ಪೊಲೀಸರಿಗೆ ನೆರವು ನೀಡಿದ್ದಾರೆ.
ಉಡುಪಿ, ಕರಾವಳಿಯಲ್ಲೂ ಮಳೆಯ ಆರ್ಭಟ, ಶಾಲೆಗಳಿಗೆ ರಜೆ
ಇನ್ನು ಮೆಕುನು ಚಂಡಮಾರುತ ಪರಿಣಾಮ ಕರಾಳಿವಳಿ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಉಡುಪಿಯಲ್ಲಿ ಬಿರುಗಾಳಿ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಉಡುಪಿ ನಗರಗಳ ಹಲವು ಕಡೆ ಮನೆಗಳು ಮುಳುಗಡೆಯಾಗಿವೆ. ಬೆಳಗ್ಗೆಯಿಂದ ಮಳೆ ಎಡಬಿಡದೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಬಹುತೇಕ ರಸ್ತೆಗಳು ಮುಳುಗಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ 2 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಂಗಳವಾರ ಹಾಗೂ ಬುಧವಾರ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಈ ನಡುವೆ ನಾಳೆ ಕರ್ನಾಟಕ ಕರಾವಳಿಗೆ ಮುಂಗಾರು ಪ್ರವೇಶ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.