ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಮುಂದಿನ ಎರಡರಿಂದ ಮೂರು ವರ್ಷಗಳ ಕಾಲ ಹೊಸ ವಾಹನ ನೋಂದಣಿ ಮಾಡದಿರಲು ಚಿಂತನೆ ನಡೆಸಿದೆ.
ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಂದಿನ 2-3 ವರ್ಷ ಹೊಸ ವಾಹನ ನೋಂದಣಿ ಮಾಡದಿರಲು ತೀರ್ಮಾನಿಸಲಾಗಿದೆ. ಮೊದಲಿಗೆ ಬೆಂಗಳೂರಿಗೆ ಮಾತ್ರ ಈ ನಿರ್ಣಯ ಸೀಮಿತವಾಗಲಿದೆ. ಈ ಕುರಿತಂತೆ ಸಾರಿಗೆ ಸಚಿವರ ಜತೆ ಚರ್ಚೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಾಹನ ನೋಂದಣಿ ಮಾಡದಂತೆ ಸಾರಿಗೆ ಇಲಾಖೆಗೆ ಸೂಚನೆ ನೀಡಲು ತೀರ್ಮಾನಿಸಲಾಗಿದೆ. ಇದಕ್ಕೆ ಬೆಂಗಳೂರಿನಲ್ಲಿ ದೊರಕುವ ಪ್ರತಿಕ್ರಿಯೆ ನೋಡಿಕೊಂಡು ರಾಜ್ಯದ ಉಳಿದ ನಗರಗಳಿಗೂ ಈ ನಿಯಮ ಅನ್ವಯಿಸಲಾಗುತ್ತದೆ ಎಂದರು.
ಈ ಕುರಿತಂತೆ ಕಾನೂನು ಇಲಾಖೆ ಅನುಮತಿ ಪಡೆದು ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ.