

ಬೆಂಗಳೂರು: 'ಮಣ್ಣಿನ ಮಗ' ಎಂದು ಕರೆಸಿಕೊಳ್ಳುವ ಮಾಜಿ ಪ್ರಧಾನಿ ಹೆಚ್. ಡಿ.ದೇವಗೌಡ ಹೆಸರಿನಲ್ಲಿ ಪ್ರತಿವರ್ಷ ಸಾಧಕ ರೈತರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ನಿರ್ಧರಿಸಿದೆ.
ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಒಬ್ಬ ರೈತ ಹಾಗೂ ಒಬ್ಬ ರೈತ ಮಹಿಳೆಗೆ ಈ ಪ್ರಶಸ್ತಿಯನ್ನು ಮೀಸಲಿಡಲಾಗಿದೆ. ತಲಾ 25 ಸಾವಿರ ರೂಪಾಯಿ ಮೊತ್ತದ ರಾಜ್ಯ ಮಟ್ಟದ ಪ್ರಶಸ್ತಿ ವಾರ್ಷಿಕ ಕೃಷಿ ಮೇಳದಲ್ಲಿ ನೀಡಲಾಗುತ್ತದೆ. ಪ್ರಶಸ್ತಿಗೆ ತಗಲುವ ವೆಚ್ಚವನ್ನು ಬೆಂಗಳೂರಿನ 'ರಂಗಚೇತನ ಸಂಸ್ಕೃತಿ ಕೇಂದ್ರ ಭರಿಸಲಿದ್ದು, ಇದಕ್ಕಾಗಿ ದತ್ತಿ ನಿಧಿಯನ್ನು ಸ್ಥಾಪಿಸಲಾಗಿದೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಪ್ರತಿವರ್ಷದಂತೆ ನಡೆಯುವ ಯುಎಎಸ್-ಬಿ ವಾರ್ಷಿಕ ಕೃಷಿ ಮೇಳ ಇದೇ ತಿಂಗಳ 15ರಿಂದ 18ರ ವರೆಗೆ ನಡೆಯಲಿದೆ. ಸುಮಾರು 10 ಲಕ್ಷ ರೈತರು ಮತ್ತು ಸಾರ್ವಜನಿಕರು ಭಾಗಿಯಾಗುವ ನಿರೀಕ್ಷೆ ಇದೆ. ಈ ಬಾರಿಯ ಕೃಷಿ ಮೇಳದಲ್ಲಿ ಜಲ ನಿರ್ವಹಣೆ ಹಾಗೂ ಯಾಂತ್ರಿಕ ಕೃಷಿಗೆ ಸಂಬಂಧಿತ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ವಿಶ್ವ ವಿದ್ಯಾಲಯ ಕುಲಪತಿ ಡಾ ಎಸ್ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.