'ಅನಂತ' ಯಾತ್ರೆ: ಅನಂತಕುಮಾರ್ ಅಂತಿಮ ಯಾತ್ರೆ ಆರಂಭ!

ನಿನ್ನೆ ನಿಧನರಾದ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಅನಂತ್ ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ...
ಅನಂತ್ ಕುಮಾರ್ ಅವರ ಅಂತಿಮ ಯಾತ್ರೆ
ಅನಂತ್ ಕುಮಾರ್ ಅವರ ಅಂತಿಮ ಯಾತ್ರೆ
ಬೆಂಗಳೂರು: ನಿನ್ನೆ ನಿಧನರಾದ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಅನಂತ್ ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ಆರಂಭವಾಗಿದ್ದು, ಪ್ರಸ್ತುತ ಪಾರ್ಥೀವ ಶರೀರ ಬಿಜೆಪಿ ಪ್ರಧಾನ ಕಚೇರಿಯ ತಲುಪಿದೆ.
ಅದಮ್ಯ ಚೇತನ, ಬಡವರ ಬಂಧು, ಧೀಮಂತ ನಾಯಕ, ಸ್ನೇಹ ಜೀವಿ, ರಾಜ್ಯ ಬಿಜೆಪಿಯ ಆಧಾರ ಸ್ತಂಭ ಅನಂತ್ ಕುಮಾರ್ ಇನ್ನು ನೆನಪು ಮಾತ್ರ. ಶ್ವಾಸಕೋಶದ ಕ್ಯಾನರ್ ನಿಂದ ಬಳಲುತ್ತಿದ್ದ ಅವರು ಸೋಮವಾರ ಬೆಳಗಿನ ಜಾವ 2 ಗಂಟೆಗೆ ಬೆಂಗಳೂರಿನ ಶಂಕರ ಆಸ್ಪತ್ರೆಯಲ್ಲಿ ವಿಧಿವಶರಾದರು. ಅನಂತ್ ಕುಮಾರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ನಡೆಸಲಾಗುತ್ತಿದೆ. ಅನಂತ್ ಕುಮಾರ್ ಪಾರ್ಥಿವ ಶರೀರವನ್ನು ನಿನ್ನೆ ಅವರ ಬಸವನಗುಡಿ ನಿವಾಸದಲ್ಲಿ ಇರಿಸಲಾಗಿತ್ತು. ಈ ವೇಳೆ ಪ್ರಧಾನಿ ಮೋದಿ, ರಾಜ್ಯ ನಾಯಕರು ನಿವಾಸಕ್ಕೆ ತೆರಳಿ ಅಂತಿಮ ದರ್ಶನವನ್ನು ಪಡೆದರು. ಇಂದು ಬೆಳಗ್ಗೆ ಬಿಜೆಪಿ ಕಚೇರಿ ಇರಿಸಿದ ಬಳಿಕ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ 8 ರಿಂದ 9 ಗಂಟೆವರೆಗೆ ಬಿಜೆಪಿ ಕಾರ್ಯಕರ್ತರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯ-ರಾಷ್ಟ್ರದಿಂದ ಗಣ್ಯಾತಿಗಣ್ಯರು, ಬೆಂಬಲಿಗರು ಅಪಾರ ಅಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಪ್ರಸ್ತುತ ಅನಂತಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ಆರಂಭವಾಗಿದ್ದು, ಪಾರ್ಥಿವ ಶರೀರದ ಅಂತಿಮ ಯಾತ್ರೆ ಎಸ್‌.ಪಿ.ಸಮಾಜರಸ್ತೆ, ಬಸವನಗುಡಿ ಮೆಡಿಕಲ್ ಸೆಂಟರ್, ಲಾಲ್‌ಬಾಗ್ ವೆಸ್ಟ್‌ ಗೇಟ್, ಗೇಟ್, ಆರ್.ವಿ.ರಸ್ತೆ, ಮಿನರ್ವ ಸರ್ಕಲ್, ಶಿವಾಜಿ ವೃತ್ತ, ಎನ್.ಆರ್.ವೃತ್ತ, ಹೈಗ್ರೌಂಡ್ ಜಂಕ್ಷನ್, ಪಿ.ಜಿ.ಹಳ್ಳಿ ಜಂಕ್ಷನ್, ಕಾವೇರಿ ಜಂಕ್ಷನ್, ಬಾಷ್ಯಂ ಸರ್ಕಲ್ ಮಾರಮ್ಮ ಸರ್ಕಲ್, ಸಂಪಿಗೆ ರಸ್ತೆ ಮೂಲಕ ಬಿಜೆಪಿ ಕಚೇರಿಗೆ ತೆಗೆದುಕೊಂಡು ಹೋಗಿ ಅಲ್ಲಿ ದರ್ಶನಕ್ಕೆ ಇಡಲಾಗುತ್ತದೆ. ನಂತರ ಬಿಜೆಪಿ ಕಚೇರಿಯಿಂದ ನ್ಯಾಷನಲ್ ಗ್ರೌಂಡ್‌ಗೆ ರವಾನಿಸಲಾಗುತ್ತದೆ. ಕಾಡು ಮಲ್ಲೇಶ್ವರ, ಸಂಪಿಗೆ ರಸ್ತೆ, ಸ್ಯಾಂಕಿ ರಸ್ತೆ, ಮಹಾರಾಣಿ ಕಾಲೇಜು ರಸ್ತೆ, ಕೆ.ಆರ್.ಸರ್ಕಲ್, ನೃಪತುಂಗ ರಸ್ತೆ, ಕಾರ್ಪೊರೇಷನ್, ದೇವಾಂಗ ಜಂಕ್ಷನ್,ಪೂರ್ಣಿಮಾ ಜಂಕ್ಷನ್, ಊರ್ವಶಿ ಜಂಕ್ಷನ್ ಮೂಲಕ ನ್ಯಾಷನಲ್ ಗ್ರೌಂಡ್‌ಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ನಂತರ ನ್ಯಾಷನಲ್ ಗ್ರೌಂಡ್‌ನಲ್ಲಿ ಸಾರ್ವಜನಿಕರ ದರ್ಶನದ ನಂತರ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ.
ಮಧ್ಯಾಹ್ನ 1 ಗಂಟೆಯ ಬಳಿಕ ಚಾಮರಾಜಪೇಟೆಯ ಟಿ.ಆರ್.ಮಿಲ್ ರುದ್ರಭೂಮಿಯಲ್ಲಿ ವೈದಿಕ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪಕ್ಷದ ಅಧ್ಯಕ್ಷ ಅಮಿತ್ ಶಾ, ಅಡ್ವಾಣಿ ಸೇರಿದಂತೆ ಬಿಜೆಪಿ ಅಗ್ರ ನಾಯಕರು ಅಶ್ರುತರ್ಪಣ ಸಲ್ಲಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com