ಆರ್'ಎಸ್ಎಸ್ ನಾಯಕ ಕಲ್ಲಡ್ಕ, ಸಂಸದ ನಳಿನ್ ವಿರುದ್ಧದ ಎಫ್ಐಆರ್ ರದ್ದು
ಕಳೆದ 2017ರಲ್ಲಿ ನಡೆದಿದ್ದ ಆರ್'ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಖಂಡಿಸಿ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಠನೆ ನಡೆಸಿದ ಹಾಗೂ ಸಭೆ ಹಮ್ಮಿಕೊಂಡು ಭಾಷಣ ಮಾಡಿದ್ದ ಆರೋ ಸಂಬಂಧ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್, ಆರ್'ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್...
ಬೆಂಗಳೂರು: ಕಳೆದ 2017ರಲ್ಲಿ ನಡೆದಿದ್ದ ಆರ್'ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಖಂಡಿಸಿ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಠನೆ ನಡೆಸಿದ ಹಾಗೂ ಸಭೆ ಹಮ್ಮಿಕೊಂಡು ಭಾಷಣ ಮಾಡಿದ್ದ ಆರೋ ಸಂಬಂಧ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್, ಆರ್'ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಒಟ್ಟು 13 ಮಂದಿ ವಿರುದ್ಧ ಬಂಟ್ವಾಳ ಟೌನ್ ಠಾಣಾ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ಮಂಗಳವಾರ ರದ್ದು ಪಡಿಸಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಪಡಿಸುವಂತೆ ಕೋರಿ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪ್ರಕರಣದ ಆರೋಪಿಗಳಾಗಿದ್ದ 13 ಮಂದಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾ.ಅಶೋಕ್ ಜಿ.ನಿಜಗಣ್ಣನವರ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶವನ್ನು ನೀಡಿದೆ.
ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ವಾದಿಸಿ, ನಿಷೇಧಾಜ್ಞೆ ಉಲ್ಲಂಘಿಸಿದರೆ ಜಿಲ್ಲಾಧಿಕಾರಿಯು ಸಂಬಂಧಪಟ್ಟ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಬೇಕು. ಆದರೆ, ಬಂಟ್ವಾಳ ಟೌನ್ ಠಾಣಾ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸುವುಲ್ಲಿ ಪೊಲೀಸರು ಕಾನೂನು ಲೋಪ ಮಾಡಿದ್ದಾರೆ.
ಇನ್ನು ಪ್ರತಿಭಟನೆ ನಡೆಸುವುದು ಸಂವಿಧಾನದತ್ತವಾದ ಮೂಲಭೂತ ಹಕ್ಕು. ಆದ್ದರಿಂದ ಅರ್ಜಿದಾರರ ವಿರುದ್ಧದ ಎಫ್ಐಆರ್ ರದ್ದುಪಡಿಸಬೇಕೆಂದು ಕೋರಿದರು. ಈ ವಾದ ಪುರಸ್ಕರಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಎಫ್ಐಆರ್ ರದ್ದುಪಡಿಸಿತು.