ಆಕೆ 'ಅವಳಲ್ಲ, ಅವನು'; ಬೆತ್ತಲೆ ಫೋಟೋ ಮೂಲಕ ಬೆದರಿಸುತ್ತಿದ್ದ ಯುವಕನ ಬಂಧನ

ಇದು ಫೇಸ್ ಬುಕ್ ನಲ್ಲಿ ಮೋಸಹೋದ ಮತ್ತೊಂದು ಘಟನೆ, ಸಾಮಾಜಿಕ ಮಾಧ್ಯಮಗಳನ್ನು ...
ಆರೋಪಿಗಳಾದ ಅರುಣ್ ಎಚ್ ಎಸ್ ಮತ್ತು ಆದಿತ್ಯ ಅಲಿಯಾಸ್ ಅಶ್ವಿನಿ
ಆರೋಪಿಗಳಾದ ಅರುಣ್ ಎಚ್ ಎಸ್ ಮತ್ತು ಆದಿತ್ಯ ಅಲಿಯಾಸ್ ಅಶ್ವಿನಿ

ಮಂಗಳೂರು: ಇದು ಫೇಸ್ ಬುಕ್ ನಲ್ಲಿ ಮೋಸಹೋದ ಮತ್ತೊಂದು ಘಟನೆ, ಸಾಮಾಜಿಕ ಮಾಧ್ಯಮಗಳನ್ನು ಬಳಸುವವರು ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ.

ತುಳು ಭಾಷೆಯ ಸಿನಿಮಾದಲ್ಲಿ ಹಾಸ್ಯನಟನಿಗೆ ಒಂದು ದಿನ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬರುತ್ತದೆ. ಅದು ಕೂಡ ಅಶ್ವಿನಿ ಎಂದು ಗುರುತಿಸಿಕೊಂಡ ಸುಂದರ ಹುಡುಗಿಯಿಂದ. ತಕ್ಷಣವೇ ರಿಕ್ವೆಸ್ಟ್ ನ್ನು ಸ್ವೀಕರಿಸಿದರು. ಅಲ್ಲಿಂದ ಸಮಸ್ಯೆ ಆರಂಭವಾಯಿತು, ಆರಂಭದಲ್ಲಿ ಮಾತುಕತೆ, ಮೊಬೈಲ್ ಸಂಖ್ಯೆ ವಿನಿಮಯ, ಚಾಟಿಂಗ್ ಎಂದು ಶರುವಾಗಿ ನಂತರ ಅದು ವಿಕೋಪಕ್ಕೆ ಹೋಯಿತು.

ಇದರಿಂದ ಬೇಸತ್ತು ನಟ ಪೊಲೀಸರಿಗೆ ದೂರು ಕೂಡ ನೀಡಿದರು. ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಆರೋಪಿಯನ್ನು ಪತ್ತೆಹಚ್ಚಿದರು. ಮೊನ್ನೆ ಮಂಗಳವಾರ ಆರೋಪಿಯನ್ನು ಹಿಡಿದು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಾಗ ದೂರು ನೀಡಿದವರಿಗೆ ಮತ್ತು ಪೊಲೀಸರಿಗೆ ನಿಜಕ್ಕೂ ಆಘಾತವಾಗಿತ್ತು. ಹುಡುಗಿಯ ವೇಷ ಹಾಕಿ ಅಶ್ವಿನಿ ಎಂದು ಹೇಳುತ್ತಿದ್ದವ ಹುಡುಗನಾಗಿದ್ದ.

ಅಶ್ವಿನಿ ಅಲಿಯಾಸ್ ಆದಿತ್ಯ(19 ವರ್ಷ) ಬೆಂಗಳೂರಿನ ಯಶವಂತಪುರದ ಸುಬೇದರ್ ಪಾಳ್ಯದ ನಿವಾಸಿಯಾಗಿದ್ದು ಮೊದಲ ವರ್ಷದ ಪಿಯುಸಿ ಓದುತ್ತಿದ್ದಾನೆ. ಪೊಲೀಸರು ಇವನ ಸಹಚರ ಕನಕಪುರದ ಅರುಣ್ ಹೆಚ್ ಎಸ್ (27 ವ), ಹಾಗೂ ಮತ್ತೊಬ್ಬ ಮೇಲ್ವಿಚಾರಕನನ್ನು ಕೂಡ ಬಂಧಿಸಿದ್ದಾರೆ. ಈ ಮೂವರು ಆರೋಪಿಗಳು ಇದೇ ರೀತಿ ಈ ಹಿಂದೆ ಹಲವರನ್ನು ವಂಚಿಸಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ಆದರೆ ಯಾರು ಕೂಡ ದೂರು ನೀಡಿರಲಿಲ್ಲ.

ನಡೆದ ಘಟನೆಯೇನು: ಒಂದು ದಿನ 20 ವರ್ಷದ ಯುವತಿ ಎಂದು ಫೋಟೋ ಹಾಕಿ ಮಂಗಳೂರಿನ 25 ವರ್ಷದ ಹಾಸ್ಯ ಕಲಾವಿದನಿಗೆ ಫ್ರೆಂಡ್ ರಿಕ್ವೆಸ್ಟ್ ಹೋಗುತ್ತದೆ. ಇಬ್ಬರ ನಡುವೆ ಸ್ನೇಹ ಹುಟ್ಟುತ್ತದೆ. ಫೋನ್ ನಂಬರ್ ಹಂಚಿಕೊಂಡು ಪ್ರತಿನಿತ್ಯ ಚಾಟಿಂಗ್ ಮಾಡುತ್ತಿದ್ದರು. ಅದು ಕೊನೆಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸುವ ಹಂತಕ್ಕೆ ಸಹ ಬೆಳೆಯಿತು.

ಒಂದು ದಿನ ಆದಿತ್ಯ ಹಾಸ್ಯನಟನಲ್ಲಿ ಬೆತ್ತಲೆ ಚಿತ್ರವನ್ನು ಕಳುಹಿಸುವಂತೆ ಕೇಳುತ್ತಾನೆ, ಅದಕ್ಕೆ ಈತ ಯಾವುದೇ ಸಂಶಯಪಡದೆ ಕಳುಹಿಸುತ್ತಾನೆ ಕೂಡ. ಆ ಚಿತ್ರವನ್ನು ಹಿಡಿದುಕೊಂಡು ಆದಿತ್ಯ ಬೆದರಿಕೆಯೊಡ್ಡಲು ಆರಂಭಿಸುತ್ತಾನೆ. ಬೆದರಿಕೆ ಹಾಕಿ 65 ಸಾವಿರ ರೂಪಾಯಿ ಕಿತ್ತುಕೊಳ್ಳುತ್ತಾನೆ. ಮತ್ತಷ್ಟು ಬೇಕೆಂದು ಒತ್ತಾಯಿಸಿದಾಗ ಹಿಂಸೆ ತಾಳಲಾರದೆ ಪೊಲೀಸರಿಗೆ ದೂರು ನೀಡುತ್ತಾನೆ.

ಇಷ್ಟು ಹೊತ್ತಿಗೆ ಎರಡನೇ ಆರೋಪಿ ಅರುಣ್ ನ ಮಧ್ಯಪ್ರವೇಶವಾಗುತ್ತದೆ. ತಾನು ಹಿರಿಯ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರಿಗೆ ಆಪ್ತ ಸಹಾಯಕನಾಗಿದ್ದೆ ಎಂದು ಕೂಡ ಸುಳ್ಳು ಹೇಳುತ್ತಾನೆ. ಪೊಲೀಸರಿಗೆ ದೂರು ನೀಡಿದಾಗ ಆಮಿಷವೊಡ್ಡಿ ಒಂದು ದಿನ ಆರೋಪಿ ಯುವಕರನ್ನು ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆ ಹತ್ತಿರ ಹಿಡಿಯುತ್ತಾರೆ. ಅಶ್ವಿನಿ ಹುಡುಗಿಯೆಂದು ಮಹಿಳಾ ಕಾನ್ಸ್ಟೇಬಲ್ ಬಂಧಿಸಿದಾಗ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದನು. ಕೊನೆಗೆ ಅಟ್ಟಿಸಿಕೊಂಡು ಹೋಗಿ ಕಾನ್ಸ್ಟೇಬಲ್ ಹಿಡಿದು ಪೊಲೀಸ್ ಠಾಣೆಯಲ್ಲಿ ಪೊಲೀಸರ ಎದುರು ನಿಲ್ಲಿಸಿದಾಗಲೇ ಗೊತ್ತಾಗಿದ್ದು ಆತ ಯುವತಿ ಎಲ್ಲ, ಯುವಕ ಎಂದು.

ಫೇಸ್ ಬುಕ್ ನಲ್ಲಿ ಹುಡುಗಿಯ ಬಟ್ಟೆ ಧರಿಸಿ ಹಲವು ಭಂಗಿಗಳಲ್ಲಿ ಆದಿತ್ಯ ಫೋಸ್ ನೀಡಿ ಫೋಟೋ ಹಾಕುತ್ತಿದ್ದ. ಹುಡುಗಿಯ ಸ್ವರದಲ್ಲಿ ಮಾತನಾಡಿ ವಂಚಿಸುತ್ತಿದ್ದ. ಪ್ರಥಮ ಪಿಯುಸಿಗೆ ಸೇರಿದ್ದರೂ ಕೂಡ ಕಾಲೇಜಿಗೆ ಸರಿಯಾಗಿ ಹೋಗುತ್ತಿರಲಿಲ್ಲ ಎನ್ನುತ್ತಾರೆ ಕಾಲೇಜಿನ ಉಪನ್ಯಾಸಕರು.

ಫೇಸ್ ಬುಕ್ ನಲ್ಲಿ ಅಶ್ವಿನಿ ವೆಂಕಟೇಶ್ ಎಂಬ ಹೆಸರಿನಲ್ಲಿ ಖಾತೆಯಿದೆ. ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಸಲಹಾ ಸಮಿತಿಯ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ಆತನ ಪ್ರೊಫೈಲ್ ನಲ್ಲಿ ಲೈಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 317 ಎಫ್ ನ ಅಧ್ಯಕ್ಷ ಎಂದು ಕೂಡ ಬರೆದುಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com