ಮರೆಯಾದ ಮಾನವೀಯತೆ: ಅಪಘಾತಕ್ಕೀಡಾಗಿ ರಕ್ಷಿಸುವಂತೆ ಅಂಗಲಾಚುತ್ತಿದ್ದರೂ ಸಹಾಯಕ್ಕೆ ಬಾರದ ಜನತೆ!

ಅಪಘಾತ ಸಂಭವಿಸಿದ ಕೂಡಲೇ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವವರಿಗೆ ರಕ್ಷಣೆ ನೀಡಲು ಕಾನೂನನ್ನೇ ಜಾರಿಗೆ ತಂದಿದೆ. ಆದರೂ, ಜನರೂ ಮಾತ್ರ ಮಾನವೀಯತೆ ಮರೆತು ಕಲ್ಲು ಹೃದಯಿಗಳಂತೆ ವರ್ತಿಸುತ್ತಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಅಪಘಾತ ಸಂಭವಿಸಿದ ಕೂಡಲೇ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವವರಿಗೆ ರಕ್ಷಣೆ ನೀಡಲು ಕಾನೂನನ್ನೇ ಜಾರಿಗೆ ತಂದಿದೆ. ಆದರೂ, ಜನರೂ ಮಾತ್ರ ಮಾನವೀಯತೆ ಮರೆತು ಕಲ್ಲು ಹೃದಯಿಗಳಂತೆ ವರ್ತಿಸುತ್ತಿದ್ದಾರೆ. 
ನೆಲಮಂಗಲ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಜೀವ ರಕ್ಷಿಸುವಂತೆ ಅಂಗಲಾಚುತ್ತಿದ್ದರೂ ಯಾರೊಬ್ಬರೂ ನೆರವಿಗೆ ಬಾರದ ಕಾರಣ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. 
ಬುಧವಾರ ರಾತ್ರಿ 9.15ರ ಸುಮಾರಿಗೆ ನೆಲಮಂಗಲದ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನದಲ್ಲಿ ಬಂದಿರುವ ಸುರೇಶ್ ಎಂಬುವವರು ನೆಲಮಂಗಲದ ಹೆದ್ದಾರಿಯಲ್ಲಿರುವ ಡಾಬಾ ಬಳಿ ವಾಹನವನ್ನು ನಿಲ್ಲಿಸಿ ಟೀ ಕುಡಿದು ಮತ್ತೆ ವಾಹನ ಹತ್ತಿದ್ದಾರೆ. ಈ ವೇಳೆ ಪಾವಗಡದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್'ಟಿಸಿ ಬಸ್ ರಭಸದಿಂದ ಡಿಕ್ಕಿ ಹೊಡೆದಿದೆ. 
ಘಟನೆ ಸಂಭವಿಸಿದ ಕೂಡಲೇ ಬಸ್ ನ್ನು ನಿಲ್ಲಿಸಿದ ಚಾಲಕ ಹಾಗೂ ನಿರ್ವಾಹಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಬಸ್ ನಲ್ಲಿ 7 ಮಂದಿ ಪ್ರಯಾಣಿಕರಿದ್ದರು. ಆದರೆ, ಅಪಘಾತ ಸಂತ್ರಸ್ತ ಚೀರಾಡುತ್ತಿದ್ದರೂ ಯಾರೊಬ್ಬರೂ ರಕ್ಷಣೆಗೆ ಧಾವಿಸಿಲ್ಲ. 
ಬಳಿಕ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಸುಂದರ್ ಎಂಬುವವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ 10 ಗಂಟೆ ಸುಮಾರಿಗೆ ಘಟನಾ ಸ್ಥಳಕ್ಕೆ ಆ್ಯಂಬುಲೆನ್ಸ್ ಬಂದಿದೆ. ಸುರೇಶ್ ಅವರನ್ನು ಕೂಡಲೇ ನೆಲಮಂಗಲದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದ ಕಾರಣ ಸುರೇಶ್ ಅವರು ಮೃತಪಟ್ಟಿದ್ದಾರೆ. ಅಪಘಾತದಿಂದಾಗಿ ಸುರೇಶ್ ಅವರ ತಲೆಗೆ ತೀವ್ರವಾಗಿ ಪೆಟ್ಟಿ ಬಿದ್ದಿದ್ದು, 42 ನಿಮಿಷಗಳ ಕಾಲ ತೀವ್ರ ರಕ್ತಸ್ರಾವವಾಗಿದೆ. 
ರಾತ್ರಿಯಾಗಿದ್ದರಿಂದ ಸ್ಥಳದಲ್ಲಿ ಕತ್ತಲಿತ್ತು. ಹೀಗಾಗಿ ಸುರೇಶ್ ಅವರನ್ನು ಚಾಲಕ ಹಾಗೂ ನಿರ್ವಾಹಕ ಗಮನಿಸಿರದೇ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 
ಸುರೇಶ್ ಅವರು 6 ವರ್ಷಗಳ ಹಿಂದಷ್ಟೇ ಚೈತ್ರ ಎಂಬುವವರನ್ನು ವಿವಾಹಗಿದ್ದು, ದಂಪತಿಗೆ ಮೂರು ವರ್ಷದ ಮಗುವಿದೆ. 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನ ಕುರಿತು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಚಾಲಕನ ಕುರಿತಂತೆ ಮಾಹಿತಿ ನೀಡುವಂತೆ ಕೆಎಸ್ಆರ್'ಟಿಸಿ ಅಧಿಕಾರಿಗಳ ಬಳಿ ಕೇಳಲಾಗಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com