ಹಂಪಿ ಉತ್ಸವಕ್ಕೆ ಕರಿನೆರಳಾಗಿ ಪರಿಣಮಿಸಲಿದೆ ಬಳ್ಳಾರಿ ಲೋಕಸಭಾ ಉಪ ಚುನಾವಣೆ?

ರಾಜ್ಯದ ಪ್ರತಿಷ್ಠೆಯ ಶಿವಮೊಗ್ಗ, ಮಂಡ್ಯ, ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ನ.3 ರಂದು ಉಪ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿರುವುದು, ಇದೀಗ ಹಂಪಿ ಉತ್ಸವಕ್ಕೆ ತೊಡಕುಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬಳ್ಳಾರಿ: ರಾಜ್ಯದ ಪ್ರತಿಷ್ಠೆಯ ಶಿವಮೊಗ್ಗ, ಮಂಡ್ಯ, ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ನ.3 ರಂದು ಉಪ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿರುವುದು, ಇದೀಗ ಹಂಪಿ ಉತ್ಸವಕ್ಕೆ ತೊಡಕುಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ. 
ಲೋಕಸಭಾ ಉಪ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಲಿದ್ದು, ಇದರ ಪರಿಣಾಮ ಹಂಪಿ ಉತ್ಸವಕ್ಕೆ ಉಪ ಚುನಾವಣೆ ಕರಿನೆರಳಂತೆ ಪರಿಣಮಿಸಲಿದೆ. ನ.3 ರಿಂದ 5ರವರೆಗೂ ಹಂಪಿ ಉತ್ಸವ ನಡೆಯಲಿದೆ. 
ಶಿವಮೊಗ್ಗದಲ್ಲಿ ಬಿ.ಎಸ್.ಯಡಿಯೂರಪ್ಪ, ಮಂಡ್ಯದಲ್ಲಿ ಪುಟ್ಟರಾಜು ಮತ್ತು ಬಳ್ಳಾರಿಯಲ್ಲಿ ಸಂಸದರಾಗಿದ್ದ ಶ್ರೀರಾಮುಲು ಅವರು ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಈ ಹಿನ್ನಲೆಯಲ್ಲಿ ಈ ಮೂವರ ರಾಜೀನಾಮೆಯಿಂದ ತೆರವಾಗಿದ್ದ ಲೋಕಸಭಾ ಕ್ಷೇತ್ರಕ್ಕೆ ನ.3 ರಂದು ಉಪ ಚುನಾವಣೆ ನಡೆಯಲಿದ್ದು, ನ.6ರಂದು ಮತ ಎಣಿಕೆ ನಡೆಯಲಿದೆ. 
ಹಂಪಿ ಉತ್ಸವ ಹಿನ್ನಲೆಯಲ್ಲಿ ಈಗಾಗಲೇ ಸಿದ್ಧತೆಗಳನ್ನು ನಡೆಸುತ್ತಿರುವ ಅಧಿಕಾರಿಗಳು ಅರ್ಜಿ ಸಲ್ಲಿಸುವಂತೆ ಕಲಾವಿದರಿಗೆ ಆಹ್ವಾನ ನೀಡುವ ಕುರಿತು ಶೀಘ್ರದಲ್ಲಿಯೇ ಸಭೆ ನಡೆಸಲು ಚಿಂತನೆ ನಡೆಸಿದ್ದರು. ಪ್ರಸಕ್ತ ತಿಂಗಳು ಸಭೆ ನಡೆಸಲು ತೀರ್ಮಾನಿಸಿದ್ದರು. ಈ ನಡುವಲ್ಲೇ ಉಪ ಚುನಾವಣೆ ಘೋಷಣೆಯಾಗಿದ್ದು, ಅ.3 ರಂದು ಮತದಾನ ಯಂತ್ರಗಳು ಬಳ್ಳಾರಿಗೆ ತಲುಪಲಿವೆ. 
ಉಪ ಚುನಾವಣೆ ದಿನಾಂಕ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಹಂಪಿ ಉತ್ಸವ ಮುಂದೂಡಲಾಗುತ್ತದೆ ಅಥವಾ ರದ್ದುಗೊಳ್ಳುವ ಸಾಧ್ಯತೆಗಳಿವೆ ಎಂದು ಜಿಲ್ಲಾ ಆಡಳಿತ ಮಂಡಳಿಯ ಅಧಿಕಾರಿಗಳು ಹೇಳುತ್ತಿದ್ದಾರೆ. 
ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ಹೀಗಾಗಿ ಹಂಪಿ ಉತ್ಸವ ನ.3 ರಂದು ನಡೆಯುವ ಕುರಿತು ನಮಗೆ ಯಾವುದೇ ಭರವಸೆಗಳಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಚುನಾವಣೆ ಬಳಿಕ ಉತ್ಸವ ನಡೆಸಬಹುದು. 2016ರಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಉತ್ಸವ ನಡೆಸಲಾಗಿತ್ತು ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com