ಇರಾನ್ ಅಧಿಕಾರಿಗಳಿಂದ 18 ಕರ್ನಾಟಕ ಮೀನುಗಾರರ ಬಂಧನ: ಸಂಕಷ್ಟದಲ್ಲಿ ಕುಟುಂಬಸ್ಥರು

ಅಕ್ರಮವಾಗಿ ಸಮುದ್ರ ಪ್ರವೇಶಿಸಿದ ಆರೋಪದ ಮೇರೆಗೆ ಇರಾನ್ ಅಧಿಕಾರಿಗಳು ಕರ್ನಾಟಕ ಮೂಲದ 18 ಮೀನುಗಾರರನ್ನು ಬಂಧನಕ್ಕೊಳಪಡಿಸಿದ್ದು, ಪರಿಣಾಮ ಮೀನುಗಾರರ ಕುಟುಂಬಸ್ಥರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕುಮಟಾ: ಅಕ್ರಮವಾಗಿ ಸಮುದ್ರ ಪ್ರವೇಶಿಸಿದ ಆರೋಪದ ಮೇರೆಗೆ ಇರಾನ್ ಅಧಿಕಾರಿಗಳು ಕರ್ನಾಟಕ ಮೂಲದ 18 ಮೀನುಗಾರರನ್ನು ಬಂಧನಕ್ಕೊಳಪಡಿಸಿದ್ದು, ಪರಿಣಾಮ ಮೀನುಗಾರರ ಕುಟುಂಬಸ್ಥರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. 
ದುಬೈನ ದೋಣಿ ಮಾಲೀಕ ಶೇಖ್ ಮರ್ವಾನ್ ಅವರೊಡನೆ ಕರ್ನಾಟಕದಿಂದ ಬಂದ 18 ಮೀನುಗಾರರು ಜುಲೈ ಅಂತ್ಯದಲ್ಲಿ ದುಬೈ ಕರಾವಳಿಯಲ್ಲಿ ಮೂರು ದೋಣಿಗಳಲ್ಲಿ ಮೀನುಗಾರಿಕೆ ನಡೆಸಿದ್ದರು. ಈ ವೇಳೆ ಜುಲೈ 27 ರಂದು ಅವರಿಗೆ ಅರಿವಿಲ್ಲದೆ ಇರಾನ್ ಸ್ವಾಧೀನದ ಕಡಲು ಪ್ರವೇಶಿಸಿದ್ದಾರೆ. ಈ ಕಾರಣದಿಂದ ಕಿಶ್ ದ್ವೀಪದ ಬಳಿ ಮೀನುಗಾರರನ್ನು ಇರಾನ್ ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದಾರೆ.
ಬಂಧಿತರ ಪೈಕಿ ಆರು ಮಂದಿಯನ್ನು ಜೈಲಿಗೆ ಕಳಿಸಲಾಗಿದ್ದರೆ ಉಳಿದ ಹನ್ನೆರಡು ಮಂದಿಯನ್ನು ದೋಣಿಯಲ್ಲೇ ಬಂಧಿಸಿಡಲಾಗಿದೆ.ಕಳೆದ ಎರಡೂ ವರೆ ತಿಂಗಳುಗಳಿಂದ ಮೀನುಗಾರರು ತಮ್ಮ ಬಿಡುಗಡೆಗಾಗಿ ನಾನಾ ವಿಧದಲ್ಲಿ ಪ್ರಯತ್ನ ನಡೆಸಿದರೂ ಸಫಲವಾಗಿಲ್ಲ. ಕುಟುಂಬ ಸದಸ್ಯರು ದೂರಾಗಿರುವ ಹಿನ್ನಲೆಯಲ್ಲಿ ಕುಟುಂಬಸ್ಥರು ಇದೀಗ ಕಂಗಾಲಾಗಿದ್ದಾರೆ. 
ಜುಲೈನಿಂದಲೂ ಈ ಮೀನುಗಾರರು ಇರಾನಿನಲ್ಲಿ ಜೈಲುವಶ ಅನುಭವಿಸುತ್ತಿದ್ದು ಬಂಧಿತ ಮೀನುಗಾರರ ಪೈಕಿ  17 ಮಂದಿ ಉತ್ತರ ಕನ್ನಡದವರಾದರೆ, ಒಬ್ಬರು ಉಡುಪಿ ಜಿಲ್ಲೆಗೆ ಸೇರಿದವರೆಂದು ಹೇಳಲಾಗುತ್ತಿದೆ. 
ಬಂಧಿತರನ್ನು ಭಟ್ಕಳದ ತೆಂಗಿನಗುಂಡಿಯ ಖಲ್ಲಲ್ ಪಾನಿ ಬುದು, ಅಬ್ದುಲ್ ಮೊಹಮ್ಮದ್ ಹುಸೇನ್, ಉಸ್ಮಾನ್ ಬಾಂಬೈಕರ್, ಮೊಹಮ್ಮದ್ ಶರೀಫ್ ಯೂಸುಫ್ ಬಾಪು, ಅಬ್ದುಲ್ಲಾ ಸುಲೇಮಾನ್ ದಂಗಿ ಮತ್ತು ಅಟೀಕ್ ಸುಲೇಮಾನ್ ಗರು, ಕುಮಟಾದ ಯಾಕುಬ್ ಇಸ್ಮಾಯಿಲ್ ಶಮು, ಇಲಿಯಾಸ್ ಅಂಬಾಜಿ, ಇಲಿಯಾಸ್ ಗರು, ಇನಾಯತ್ ಅಬ್ದುಲ್ ಆದಿರ್ ಶಮ್ಶು, ಖಸೀಮ್ ಶೇಕ್ ಮತ್ತು ಅಜ್ಮಲ್ ಮೂಸಾ ಶಮು ಮುರುಡೇಶ್ವರ ಹಾಗೂ ಇತರೆ ಪ್ರದೇಶದವರಾದ  ಇಬ್ರಾಹಿಂ ಮುಲ್ಲಾ ಫಕೀರಾ, ಮೊಹಮ್ಮದ್ ಅನ್ಸಾರಿ ಇಸ್ಮಾಯಿಲ್ ಬಾಪು ಮತ್ತು ನಯೀಮ್ ಹಸನ್ ಬಂದಿ ಎಂದು ಗುರ್ತಿಸಲಾಗಿದೆ.
ಯಾಕುಬ್ ಇಸ್ಮಾಯಿಲ್ ಶಮಾಲಿ ಪತ್ನಿ ಮುಮ್ತಾಸ್ ಮಾತನಾಡಿ, ನಮಗೆ ನಾಲ್ಕು ಮಕ್ಕಳಿದ್ದು, ಇದರಲ್ಲಿ ಮೂವರು ಮಕ್ಕಳು ಖಾಸಗಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಇನ್ನೆರಡು ಮೂರು ವಾರಗಳಲ್ಲಿ ಶಾಲೆಯ ಶುಲ್ಕವನ್ನು ಪಾವತಿ ಮಾಡಬೇಕು. ಆದರೆ, ನನ್ನ ಬಳಿ ಹಣವಿಲ್ಲ. ನನ್ನ ಪತಿ ಬಿಡುಗಡೆಗೊಂಡು ಸುರಕ್ಷಿತವಾಗಿ ಮನೆಗೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಪತಿ ಮನೆಗೆ ಬಂದರೆ ಮಾತ್ರವೇ ಮಕ್ಕಳ ವಿದ್ಯಾಭ್ಯಾಸಕ್ಕೆ ಏನಾದರೂ ಮಾಡಬಹುದು ಎಂದು ಹೇಳಿದ್ದಾರೆ. 
ಕಾಶಿಮ್ ಇಸ್ಮಾಯಿಲ್ ಶೇಖ್ ಪತ್ನಿ ಫರೀದಾ ಮಾತನಾಡಿ, ನನ್ನ ಪತಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, ಕಳೆದ ಒಂದೂವರೆ ತಿಂಗಳಿನಿಂದಲು ಇರಾನ್ ಜೈಲಿನಲ್ಲಿರಿಸಲಾಗಿದೆ. ಆಗಸ್ಟ್ 22ರ ಬಕ್ರೀದ್ ಹಬ್ಬದ ದಿನದಂದು ಪತಿಯೊಂದಿಗೆ ಮಾತನಾಡಿದ್ದ. ಇದಾದ ಬಳಿಕ ಈವರೆಗೂ ಪತಿ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 
ಫರೀದಾ ಅವರಿಗೆ ಮೂವರು ಮಕ್ಕಳಿದ್ದು, ಇವರಲ್ಲಿ ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಪ್ರಸ್ತುತ ಅವರ ಬಳಿ ಹಣವಿಲ್ಲದ ಕಾರಣ ಮಕ್ಕಳ ವಿದ್ಯಾಭ್ಯಾಸ ಕುರಿತು ಕಂಗಾಲಾಗಿದ್ದಾರೆ. ಮುಮ್ತಾಜ್ ಹಾಗೂ ಫರೀದಾ ಅವರಂತೆಯೇ ಬಂಧಿತರರ ಇತರೆ ಪತ್ನಿಯರಿಗೂ 3-4 ಮಕ್ಕಳಿದ್ದು, ಕುಟುಂಬಸ್ಥರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com