ಐಎಎಸ್ ಅಧಿಕಾರಿಯ ನವಜಾತ ಶಿಶುವಿಗೇ ನಿಷೇಧಿತ ಲಸಿಕೆ, ದೂರು ದಾಖಲು!

ನವಜಾತ ಶಿಶುವಿಗೆ ಅವಧಿ ಮೀರಿದ ಮತ್ತು ನಿಷೇಧಿತ ಪೋಲಿಯೋ ಲಸಿಕೆ ಹಾಕಿದ ಆರೋಪದ ಮೇರೆಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ದೂರು ದಾಖಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನವಜಾತ ಶಿಶುವಿಗೆ ಅವಧಿ ಮೀರಿದ ಮತ್ತು ನಿಷೇಧಿತ ಪೋಲಿಯೋ ಲಸಿಕೆ ಹಾಕಿದ ಆರೋಪದ ಮೇರೆಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ದೂರು ದಾಖಲಿಸಿದ್ದಾರೆ.
ಇಂದಿರಾ ನಗರದ ಸಿಎಂಎಚ್ ಆಸ್ಪತ್ರೆ ವೈದ್ಯ ಡಾ. ಸುರೇಶ್ ಮತ್ತು ದಾದಿ ಕೃಷ್ಣಮ್ಮ ವಿರುದ್ಧ ದೂರು ದಾಖಲಾಗಿದ್ದು, ತಮ್ಮ ನವಜಾತ ಶಿಶುವಿಗೆ ಅವಧಿ ಮೀರಿದ ಮತ್ತು ನಿಷೇಧಿತ ಪೋಲಿಯೋ ಲಸಿಕೆ ಹಾಕಿದ್ದಾರೆ ಎಂದು ಆರೋಪಿಸಿ ವೈದ್ಯ ಮತ್ತು ದಾದಿ ವಿರುದ್ಧ ಪಲ್ಲವಿ ಅಕುರಾತಿ ದೂರು ದಾಖಲಿಸಿದ್ದಾರೆ. 
ಮೂಲಗಳ ಪ್ರಕಾರ ಕೆಲ ದಿನಗಳ ಹಿಂದೆ ಪಲ್ಲವಿ ಅಕುರಾತಿ ಅವರು ತಮ್ಮ 10 ವಾರದ ನವಜಾತ ಮಗುವಿಗೆ ಪೋಲಿಯೋ ಲಸಿಕೆ ಹಾಕಲು ಮುಂದಾಗಿದ್ದರು. ಈ ಬಗ್ಗೆ ಇಲಾಖೆಯ ಅಧಿಕಾರಿಯೊಬ್ಬರು ನೀಡಿದ ಸಲಹೆ ಮೇರೆಗೆ ಪಲ್ಲವಿ ಅಕುರಾತಿ ಅವರು ಸಿಎಂಎಚ್ ಆಸ್ಪತ್ರೆಗೆ ತಮ್ಮ ಮಗುವಿಗೆ ಸಿಎಂಎಚ್ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಬಳಿ ಲಸಿಕೆ ಹಾಕಿಸಿದ್ದಾರೆ.  ಸುರೇಶ್ 4 ಬಗೆಯ ಲಸಿಕೆ ತರಲು ಚೀಟಿ ಬರೆದು ಕೊಟ್ಟಿದ್ದರು. ಒಪಿವಿ ಲಸಿಕೆ ಆಸ್ಪತ್ರೆಯಲ್ಲೇ ಲಭ್ಯವಿದ್ದ ಹಿನ್ನೆಲೆಯಲ್ಲಿ ಉಳಿದ ಮೂರು ಲಸಿಕೆಗಳನ್ನು ಪಲ್ಲವಿ ಅವರು ಹೊರಗಿನಿಂದ ತಂದಿದ್ದರು.
ಬಳಿಕ ಆಸ್ಪತ್ರೆ ನರ್ಸ್ ಕೃಷ್ಣಮ್ಮ 3 ಲಸಿಕೆಗಳನ್ನು ಪಲ್ಲವಿ ಅವರ ಮಗುವಿಗೆ ಹಾಕಿದ್ದರು. ಮಗುವಿಗೆ ಹಾಕಿದ ಗುಲಾಬಿ ಬಣ್ಣದ ಲಸಿಕೆಯನ್ನು ಪಲ್ಲವಿ ಪರಿಶೀಲಿಸಿದಾಗ ಅದರ ಅವಧಿ ಮೀರಿರುವುದು ಮತ್ತು ಉತ್ಪಾದನೆ ನಿಷೇಧಿಸಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ದಾದಿಯನ್ನು ಪ್ರಶ್ನಿಸಿದಾಗ, ವೈದ್ಯರ ಸಲಹೆ ಮೇರೆಗೆ ಲಸಿಕೆ ಹಾಕಿದ್ದೇನೆ ಎಂದು ತಿಳಿಸಿದ್ದರು. ಈ ಬಗ್ಗೆ ಪಲ್ಲವಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ವೈದ್ಯರ ಗಮನಕ್ಕೆ ತಂದಿದ್ದಾರೆ. 
ಇದೀಗ ಈ ಸಂಬಂಧ ಅಧಿಕಾರಿ ಇಂದಿರಾನಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಮ್ಮ ದೂರಿನಲ್ಲಿ ಪಲ್ಲವಿ ಅವರು, 'ಲಸಿಕೆ ಹಾಕುವುದಕ್ಕಿಂತ ಮೊದಲು ಕೆಲ ವೈದ್ಯಕೀಯ ಸೂಚನೆ ಪಾಲಿಸಿಲ್ಲ. ಮಗುವಿಗೆ ಚುಚ್ಚುಮದ್ದು ಹಾಕುವ ವೇಳೆಯೂ ದಾದಿ ನಿರ್ಲಕ್ಷ್ಯ ವಹಿಸಿದ್ದಾರೆ. ಅವಧಿ ಮೀರಿದ ಲಸಿಕೆಗಳನ್ನು ಮಗುವಿಗೆ ನೀಡಿದ ಹಿನ್ನೆಲೆಯಲ್ಲಿ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 
ದೂರಿನಲ್ಲಿರುವ ಆರೋಪಗಳು ಸುಳ್ಳು: ಆರೋಪಿ ವೈದ್ಯ ಸುರೇಶ್
ಇನ್ನು ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ಅವರ ದೂರಿನ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಪಿ ವೈದ್ಯ ಸುರೇಶ್ ಕುಮಾರ್ ಅವರು, ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಪಲ್ಲವಿ ಅವರ ಮಗುವಿಗೆ ಈಸಿ ಸಿಕ್ಸ್ ಎಂಬ ಒಂದು ಲಸಿಕೆಯನ್ನು ಬಿಟ್ಟು ಇನ್ನಾವುದೇ ಲಸಿಕೆಯನ್ನೂ ಹಾಕಿಲ್ಲ. ಇದರಿಂದ ಮಗುವಿನ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿಯಿಲ್ಲ. ಬಿಬಿಎಂಪಿ ಅಧಿಕಾರಿಗಳೂ ಕೂಡ ಆಸ್ಪತ್ರೆಯ ಅವರಣದಲ್ಲಿ ಔಷಧಾಲಯಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಅವರಿಗೆ ಅಲ್ಲಿ ಯಾವುದೇ ರೀತಿಯ ಅಕ್ರಮ ಕಂಡುಬಂದಿಲ್ಲ. ಹೀಗಿದ್ದೂ ಪಲ್ಲವಿ ಅವರ ದೂರು ಅಚ್ಚರಿ ತಂದಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಎಂಎಚ್ ಆಸ್ಪತ್ಪೆಯ ನಿರ್ದೇಶಕ ಯು ಸುಧೀರ್ ಅವರು, ಈ ಬಗ್ಗೆ ತಮಗೆ ಸ್ಪಷ್ಟ ಮಾಹಿತಿ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com