ದಸರಾ ಕ್ರೀಡಾಕೂಟ: ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್, 2ನೇ ಸ್ಥಾನ ಪಡೆದ ಬೆಂಗಳೂರು
ಮಂಗಳವಾರ ಮುಕ್ತಾಯವಾದ ದಸರಾ ಸಿಎಂ ಕಪ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಉಳಿದಂತೆ ಬೆಂಗಳೂರು ಗ್ರಾಮಾಂತರ ರನ್ನರ್ ಅಪ್ ಆಗಿದೆ...
ಮೈಸೂರು: ಮಂಗಳವಾರ ಮುಕ್ತಾಯವಾದ ದಸರಾ ಸಿಎಂ ಕಪ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಉಳಿದಂತೆ ಬೆಂಗಳೂರು ಗ್ರಾಮಾಂತರ ರನ್ನರ್ ಅಪ್ ಆಗಿದೆ.
ಮಹಿಳೆಯರ ವಿಭಾಗದಲ್ಲಿ ಮೈಸೂರಿನ ರೀನಾ ಜಾರ್ಜ್ ಮತ್ತು ಪುರುಷರ ವಿಭಾಗದಲ್ಲಿ ಬೆಂಗಳೂರಿನ ಶಶಿಕಾಂತ್ ಶ್ರೇಷ್ಠ ಅಥ್ಲೀಟ್ ಗೌರವಕ್ಕೆ ಪಾತ್ರರಾದರು,
ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಪುರುಷರ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಸುದೀರ್ ಸಿರಾ ದೊನೆ 56.17ಮೀ, ಯಮನೂರುಪ್ಪ 47.97 ಮೀ, ರಾಹುಲ್ ರಾಮ 46.41 ಮೀ ದೂರ ಎಸೆದು ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚುಗೆದ್ದುಕೊಂಡರು.
ಮಹಿಳೆಯರ ಹ್ಯಾಮರ್ ಥ್ರೋನಲ್ಲಿ ಮೈಸೂರಿನ ಹರ್ಷಿತಾ 47.98 ಮೀ, ದಕ್ಷಿಣ ಕನ್ನಡದ ಅಮ್ರೀನ್ 45.62ಮೀ, ವೀಕ್ಷಾ 35.51 ಮೀ ದೂರ ಎಸೆಯುವ ಮೂಲಕ ಚಿನ್ನ, ಬೆಳ್ಳಿ ಹಾಗೂ ಕಂಚು ಜಯಿಸಿದರು.
ದಕ್ಷಿಣ ಕನ್ನಡದ ಪ್ರದ್ಯುಮ್ನ ಬೋಪಯ್ಯ 56.2 ಸೆ, ಅಜಿತ್ 56.5 ಸೆ, ಕೃಷ್ಣಾ 57.3 ಸೆ ಗಳಲ್ಲಿ ಗುರಿ ತಲುಪಿ ಕ್ರಮವಾಗಿ ಚಿನ್ನ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದುಕೊಂಡರು.
ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದ ಬಳಿಕ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು, ಸೋಲು, ಗೆಲುವಿಗಿಂತಲೂ ಹೆಚ್ಚಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಹೆಚ್ಚು ಮುಖ್ಯವಾಗಿರುತ್ತದೆ. ಕ್ರೀಡಾಪಟುಗಳು ಕ್ರೀಡಾಮನೋಭಾವವನ್ನು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದ್ದಾರೆ.
ದಸರಾ ಇತಿಹಾಸದಲ್ಲಿಯೇ ಮುಖ್ಯಮಂತ್ರಿಗಳ ಕಪ್ ಹೆಸರಿನೊಂದಿಗೆ ಇದೇ ಮೊದಲ ಬಾರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ರಾಜ್ಯ ಸರ್ಕಾರ ಇದಕ್ಕಾಗಿ ರೂ.7 ಕೋಟಿ ಮೀಸಲಿಟ್ಟಿತ್ತು.