ಸಮಯಾವಕಾಶದ ಕೊರತೆ, ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ!

ಸಮಯಾವಕಾಶದ ಕೊರತೆಯಿಂದಾಗಿ ಡಿಸೆಂಬರ್ ನಲ್ಲಿ ನಡೆಯಬೇಕಿದ್ದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿಗೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಸಮಯಾವಕಾಶದ ಕೊರತೆಯಿಂದಾಗಿ ಡಿಸೆಂಬರ್ ನಲ್ಲಿ ನಡೆಯಬೇಕಿದ್ದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿಗೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಬಂದಿದೆ.
ಮೂಲಗಳ ಪ್ರಕಾರ ಇದೇ ಡಿಸೆಂಬರ್  7, 8, 9ಕ್ಕೆ ನಡೆಯಬೇಕಿದ್ದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪೂರ್ವಸಿದ್ಧತೆಗೆ ಸಮಯಾವಕಾಶ ಅಭಾವ ಕಾರಣ ನೀಡಿ 2019 ರ ಜನವರಿ 6,7,8ಕ್ಕೆ ಮುಂದೂಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್​ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಅವರು ಮಾತನಾಡಿ, 'ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿ ನಡೆಯಲಿರುವ ಸಮ್ಮೇಳನದ ಬಗ್ಗೆ ಈಗಾಗಲೇ 3 ಸಿದ್ಧತಾ ಸಭೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಒಳಗೊಂಡ ಸ್ವಾಗತ ಸಮಿತಿ ಅಕ್ಟೋಬರ್ 17ರಂದು ಸಭೆ ನಡೆಸಿ, ಸಮ್ಮೇಳನವನ್ನು ಒಂದು ತಿಂಗಳು ಮುಂದೂಡಿದರೆ ಸಾಕಷ್ಟು ಸಿದ್ಧತೆ ಮಾಡಿಕೊಂಡು ಅರ್ಥಪೂರ್ಣವಾಗಿ ಆಚರಿಸಬಹುದು ಎಂದು ಸಲಹೆ ನೀಡಿದೆ. ಈ ನಿಟ್ಟಿನಲ್ಲಿ ಜನವರಿ ಮೊದಲ ವಾರ ಆಯೋಜನೆಗೆ ನಿರ್ಧರಿಸಿದ್ದೇವೆ. ಈ ವಿಚಾರವನ್ನು ಸಮ್ಮೇಳನಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರರಿಗೂ ತಿಳಿಸಲಾಗಿದ್ದು, ಅವರೂ ಕೂಡ ಸಮ್ಮತಿಸಿದ್ದಾರೆ ಎಂದರು.
ಇನ್ನು ಸಮ್ಮೇಳನದಲ್ಲಿ 20 ಗೋಷ್ಠಿ ನಡೆಯಲಿದ್ದು, ಸಾಹಿತಿ ಡಾ.ಸಿ.ಎನ್. ರಾಮಚಂದ್ರನ್ ನೇತೃತ್ವದಲ್ಲಿ ಪ್ರೊ.ಎಲ್.ಎನ್. ಮುಕುಂದರಾಜ್, ಡಾ. ನೀಲಗಿರಿ ತಳವಾರ, ಡಾ.ಕೆ. ಶಾರದಾ, ಡಾ. ಪದ್ಮರಾಜ್ ದಂಡಾವತಿ, ಡಾ. ರಾಜೇಶ್ವರಿ ಮಹೇಶ್ವರಯ್ಯ ಒಳಗೊಂಡ ಸಮಿತಿಯು ಗೋಷ್ಠಿಯ ವಿಷಯಗಳನ್ನು ಅಂತಿಮಗೊಳಿಸಿದೆ. ಗೋಷ್ಠಿಯಲ್ಲಿ ಭಾಗವಹಿಸುವ ವಿದ್ವಾಂಸರ ಆಯ್ಕೆ ಇನ್ನೂ ನಡೆದಿಲ್ಲ ಎಂದು ಬಳಿಗಾರ್ ಮಾಹಿತಿ ನೀಡಿದರು.
28 ವರ್ಷದ ನಂತರ ಧಾರವಾಡ ಜಿಲ್ಲೆ ಸಮ್ಮೇಳನದ ಆತಿಥ್ಯ ವಹಿಸಿಕೊಂಡಿದ್ದು, ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ. ಹೀಗಾಗಿ 12 ಕೋಟಿ ರೂ. ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ ಎಂದು ಮನು ಬಳಿಗಾರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com