ಬೀದಿನಾಯಿ, ಬೆಕ್ಕುಗಳಿಗೆ ತಿಂಡಿ ಹಾಕುವ ವಿಚಾರದಲ್ಲಿ ದ್ವೇಷ: ನೆರೆಮನೆಯಾತನನ್ನು ಕೊಚ್ಚಿ ಹಾಕಿದ್ದ ವಿದ್ಯಾರ್ಥಿಗೆ ಜೀವಾವಧಿ ಶಿಕ್ಷೆ!

ಬೀದಿನಾಯಿ ಹಾಗೂ ಬೆಕ್ಕುಗಳಿಗೆ ತಿಂಡಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದು, ಆ ಜಗಳ ದ್ವೇಷಕ್ಕೆ ತಿರುಗಿ ನೆರೆಮನೆ ವಾಸಿಯನ್ನೇ ಕೊಚ್ಚಿ ಹತ್ಯೆ ಮಾಡಿದ್ದ ಕಾಲೇಜು ವಿದ್ಯಾರ್ಥಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಂಗಳೂರು: ಬೀದಿನಾಯಿ ಹಾಗೂ ಬೆಕ್ಕುಗಳಿಗೆ ತಿಂಡಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದು, ಆ ಜಗಳ ದ್ವೇಷಕ್ಕೆ ತಿರುಗಿ ನೆರೆಮನೆ ವಾಸಿಯನ್ನೇ ಕೊಚ್ಚಿ ಹತ್ಯೆ ಮಾಡಿದ್ದ ಕಾಲೇಜು ವಿದ್ಯಾರ್ಥಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ. 
ಬಿಬಿಎಂ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ ಚಂದ್ರಶೇಖರ್ (22) ಅಪರಾಧಿಯಾಗಿದ್ದಾನೆ.ಬಿಎಸ್ಎನ್ಎಲ್ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ತಿಮ್ಮಪ್ಪ ಪೂಜಾರಿ (58) ಹತ್ಯೆಗೀಡಾಗಿದ್ದ ವ್ಯಕ್ತಿಯಾಗಿದ್ದರು. 
ಬೆಳ್ತಂಗಡಿಯ ಸುಧೀರ್ ಹೊಳ್ಳ ಎಂಬುವವರ ಮನೆಗಳಲ್ಲಿ ಚಂದ್ರಶೇಖರ್ ಹಾಗೂ ತಿಮ್ಮಪ್ಪ ಪೂಜಾರಿಯವರು ಬಾಡಿಗೆಗೆ ವಾಸವಿದ್ದರು. 
ಅಪರಾಧಿಯಾಗಿರುವ ಚಂದ್ರಶೇಖರ್ ಪ್ರತೀನಿತ್ಯ ಬೀದಿ ನಾಯಿ ಹಾಗೂ ಬೆಕ್ಕುಗಳಿಗೆ ಆಹಾರ ನೀಡುತ್ತಿದ್ದ. ಇದರಿಂದ ಪೂಜಾರಿಯವರ ಮನೆಯ ಮುಂದೆ ಗಲೀಜು ಆಗುತ್ತಿತ್ತು. ಈ ವಿಚಾರಕ್ಕೆ ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳವಾಗಿದೆ. ಬಳಿಕ ಪೂಜಾರಿಯವರ ಮೇಲೆ ಚಂದ್ರಶೇಖರ್ ದ್ವೇಷ ಬೆಳೆಸಿಕೊಂಡಿದ್ದ. 
2017ರ ಜೂನ್ 2 ರಂದು ತಿಮ್ಮಪ್ಪ ಪೂಜಾರಿ ಮಕ್ಕಳಿಗೆ ಐಸ್ ಕ್ರೀಂ ತರಲು ಅಲ್ಲಾಟಬೈಲು ಸಂತೆಕಟ್ಟೆ ರಸ್ತೆಯಲ್ಲಿ ಹೋಗುವಾಗ ಮನೆಯಿಂದ ಸುಮಾರು 60 ಅಡಿ ದೂರದಲ್ಲಿ ಚಂದ್ರಶೇಖರ್ ಏಕಾಏಕಿ ಬಂದು ಚಂದ್ರಶೇಖರ್ ಅವರ ಮೇಲೆ ಕತ್ತಿಯಿಂದ ಕಡಿದಿದ್ದಾನೆ. ಈ ವೇಳೆ ಕೂಗಾಟಗಳನ್ನು ಕೇಳಿ ತಿಮ್ಮಪ್ಪ ಅವರ ಪತ್ನಿ ಚಂಪಾವತಿ, ಮಕ್ಕಳು, ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ. ಬಳಿಕ ಚಂದ್ರಶೇಖರ್ ಎಲ್ಲರಿಗೂ ಕತ್ತಿ ತೋರಿಸಿ ಬೆದರಿಕೆ ಹಾಕಿದ್ದಾನೆ. 
ಮಕ್ಕಳು ಹಾಗೂ ಪತ್ನಿಯ ಮುಂದೆಯೇ ಚಂದ್ರಶೇಖರ್ ಪೂಜಾರಿಯವರ ಮೇಲೆ ಕತ್ತಿಯಿಂದ ಮನಬಂದಂತೆ ಕಡಿದಿದ್ದಾನೆ. ಪೂಜಾರಿಯವರ ದೇಹದ ಮೇಲೆ ಒಟ್ಟು 21 ಕಡಿದಿದ್ದ ಗಾಯಗಳಿರುವುದು ಕಂಡುಬಂದಿತ್ತು. 
ಪ್ರಕರಣ ಸಂಬಂಧ ಪ್ರಾಸಿಕ್ಯೂಶನ್ ಮತ್ತು ಆರೋಪಿಯ ವಾದ ಆಲಿಸಿದ ಹಾಲಿ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ಅವರು ಚಂದ್ರಶೇಖರ್ ಕೊಲೆ ಮಾಡಿರುವುದು ಹಾಗೂ ಜೀವಬೆದರಿಕೆ ಹಾಕಿರುವುದು ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ. ಅಲ್ಲದೆ, ಅಪರಾಧಿಗೆ ರೂ.5 ಸಾವಿರ ದಂಡ, ದಂಡ ತಪ್ಪಿದರೆ 6 ತಿಂಗಳ ಸಜೆ ವಿಧಿಸಿದ್ದಾರೆ. 
ಮೃತರ ಪತ್ನಿ ಹಾಗೂ ಮಕ್ಕಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಬಹುದು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com