ಬಿಬಿಎಂಪಿಗೆ ಭಾರೀ ಸವಾಲಾಗಿದೆ 'ಸ್ವಚ್ಛ ಬೆಂಗಳೂರು': ಸಮಸ್ಯೆಗಳೇನು?

ಬೆಂಗಳೂರು ನಗರವನ್ನು ಸ್ವಚ್ಛ ಮಾಡಲು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ನಗರವನ್ನು ಸ್ವಚ್ಛ ಮಾಡಲು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಾಲಾವಧಿ ನಿಗದಿಪಡಿಸಿದೆ. ಆದರೆ ಸ್ವಚ್ಛ ಬೆಂಗಳೂರಿನ ಸವಾಲನ್ನು ಎದುರಿಸಿ ಅದನ್ನು ಸಾಧಿಸುವುದು ಕಷ್ಟ. ಕಸದಿಂದ ಹಿಡಿದು ಉಗುಳುವವರೆಗೆ, ಸಾರ್ವಜನಿಕ ಶೌಚಾಲಯದಿಂದ ಹಿಡಿದು ಕೊಳಚೆನೀರು ಹರಿದುಹೋಗುವವರೆಗೆ ಬೆಂಗಳೂರು ನಗರವು ಸ್ವಚ್ಛ ಬೆಂಗಳೂರು ಎಂಬ  ಹಣೆಪಟ್ಟಿಯನ್ನು ಹೊಂದಲು ಬಹುದೂರ ಸಾಗಬೇಕಾಗಿದೆ.

ಇಂದು ಬೃಹತ್ ಬೆಂಗಳೂರಿನ ಜನಸಂಖ್ಯೆ 1.2 ಕೋಟಿ ದಾಟಿದೆ. ಪ್ರತಿ ಬಾರಿ ಸಮೀಕ್ಷೆ ನಡೆಸಿದಾಗಲೂ ಸ್ವಚ್ಛ ಭಾರತ ರ್ಯಾಂಕಿಂಗ್ ಪಟ್ಟಿಯಿಂದ ಬೆಂಗಳೂರು ಹೊರ ಉಳಿಯುತ್ತದೆ. ನಗರದ ಘನ ತ್ಯಾಜ್ಯ ನಿರ್ವಹಣೆ, ಕಸ ವಿಲೋವಾರಿ, ಬಯಲು ಶೌಚಮುಕ್ತ, ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳ ಲಭ್ಯತೆ ಹೀಗೆ ಹತ್ತಾರು ಸ್ವಚ್ಛತೆ ವಿಷಯಗಳನ್ನು ಪರಿಶೀಲಿಸಿ ಒಂದು ನಗರವನ್ನು ಸ್ವಚ್ಛ ಭಾರತ ರ್ಯಾಂಕಿಂಗ್ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

ಈ ಬಗ್ಗೆ ಮಾಹಿತಿ ನೀಡಿದ ಕಾರ್ಯಕರ್ತೆ ಹಾಗೂ ನಗರ ತಜ್ಞೆ ಕಾತ್ಯಾಯಿನಿ ಚಾಮರಾಜ್, ನಗರದ ಸ್ವಚ್ಛತೆಯನ್ನು ಸುಧಾರಿಸಲು ಸ್ವಚ್ಛ ಭಾರತದ ಮಾನದಂಡವನ್ನು ಮುಟ್ಟಬೇಕಾಗುತ್ತದೆ. ಅದು ಸೆಪ್ಟೆಂಬರ್ 1ಕ್ಕೆ ಆರಂಭವಾಗಬೇಕಾಗಿತ್ತು. ಅದು ಮುಂದಿನ ಜನವರಿಯಲ್ಲಿ ನೀಡುವ ಸ್ವಚ್ಛ ಭಾರತ ರ್ಯಾಂಕಿಂಗ್ ಸಮೀಕ್ಷೆಗೆ ಅನುಕೂಲವಾಗುತ್ತಿತ್ತು. ಆದರೆ ಬಿಬಿಎಂಪಿ ಇನ್ನೂ ಅದನ್ನು ಆರಂಭಿಸಿಲ್ಲ ಎನ್ನುತ್ತಾರೆ.

ನಗರದ ಸ್ವಚ್ಛತೆ ಬಗ್ಗೆ ಅಕ್ಟೋಬರ 31ರೊಳಗೆ ವಿಸ್ತ್ರೃತ ವರದಿ ಸಲ್ಲಿಸುವಂತೆ ಬಿಬಿಎಂಪಿ ಕಳೆದ ಗುರುವಾರ ಸಮಯ ನಿಗದಿಪಡಿಸಿದೆ. ನಗರದ ಸ್ವಚ್ಛತೆಯೆಂದರೆ ಕೇವಲ ಕಸ ವಿಲೇವಾರಿ ಒಳಚರಂಡಿ ನಿರ್ವಹಣೆ ಮಾತ್ರ ಸಾಕಾಗುವುದಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಕೆಲವು ವಿಷಯಗಳನ್ನು ಆದ್ಯತೆಯಾಗಿ ಗಮನಹರಿಸಬೇಕಾಗಿದೆ.

ಬಿಬಿಎಂಪಿಯ ಮುಂದಿರುವ ದಾರಿಯೇನು?: ಬಿಬಿಎಂಪಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ನೇರವಾಗಿ ಅವರ ಖಾತೆಗಳಿಗೆ ವೇತನ ಜಮೆಯಾಗುತ್ತದೆ. ಇದರಲ್ಲಿ ಗುತ್ತಿಗೆದಾರರ ಮಧ್ಯ ಪ್ರವೇಶವಿಲ್ಲ. ಆದರೂ ಪುಶ್ ಕಾರ್ಟ್ಸ್, ಆಟೋ ಟಿಪ್ಪರ್ ಗಳಿಂದ ಹಿಡಿದು ಕಾಂಪಾಕ್ಟರ್ ಗಳವರೆಗೆ ಬಿಬಿಎಂಪಿ ಗುತ್ತಿಗೆದಾರರನ್ನೇ ಅವಲಂಬಿಸಿದೆ. ಅದರ ಬದಲು ಬಿಬಿಎಂಪಿ ಸ್ವಂತ ಉಪಕರಣಗಳನ್ನು ಹೊಂದಿದ್ದರೆ ಕಾರ್ಯದಕ್ಷತೆಗೆ ಒಳ್ಳೆಯದು.

ಇ ಶೌಚಾಲಯಗಳ ಮೇಲೆ ಹೆಚ್ಚು ಒತ್ತು ನೀಡುವ ಬದಲು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಬಿಬಿಎಂಪಿ ಹೆಚ್ಚು ಗಮನ ಹರಿಸಬೇಕು. ಸಿಸಿಟಿವಿ ಕ್ಯಾಮರಾಗಳನ್ನು ಅಲ್ಲಲ್ಲಿ ಅಳವಡಿಸಿ ಕಸಗಳನ್ನು ಹಾಕುವವರು ಮತ್ತು ಅಲ್ಲಲ್ಲಿ ಉಗುಳುವವರನ್ನು ಪತ್ತೆಹಚ್ಚಬೇಕು. ಕಸಗಳನ್ನು ರಸ್ತೆ ಮೇಲೆ, ಸಾರ್ವಜನಿಕ ಸ್ಥಳಗಳಲ್ಲಿ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿಯನ್ನು ವಿಕೇಂದ್ರೀಕರಣಗೊಳಿಸಬೇಕು. ಘನತ್ಯಾಜ್ಯ ನಿರ್ವಹಣೆ ಘಟಕವನ್ನು ಸ್ಥಾಪಿಸಿ ಸಂಸ್ಕರಿಸಿದ ನೀರನ್ನು ಚರಂಡಿಗೆ ಬಿಡಬೇಕು.
ಕಸ ವಿಲೇವಾರಿ ಸಮಸ್ಯೆ: ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ಸುಮಾರು 5 ಸಾವಿರ ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತದೆ. ಅವುಗಳಲ್ಲಿ ಶೇಕಡಾ 40ರಷ್ಟು ಹಸಿ ತ್ಯಾಜ್ಯಗಳು. ಮಾವಳ್ಳಿಪುರ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ಹಾಕುವುದಕ್ಕೆ ಅಲ್ಲಿನ ನಿವಾಸಿಗಳು 2012ರಲ್ಲಿ ವಿರೋಧ ವ್ಯಕ್ತಪಡಿಸಿದ ನಂತರ ಕಸ ವಿಲೇವಾರಿ ಸಮಸ್ಯೆ ತೀವ್ರವಾಯಿತು.

2014ರಲ್ಲಿ ಮಂಡೂರಿನಲ್ಲಿ ಕಸ ಹಾಕುವುದಕ್ಕೆ ಸಹ ಅಲ್ಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಇದೇ ಪರಿಸ್ಥಿತಿ ಲಕ್ಷ್ಮೀಪುರ, ಎಸ್ ಬಿಂಗಿಪುರ ಮತ್ತು ಇತರ ಸ್ಥಳಗಳಲ್ಲಿ ಕೂಡ ಉಂಟಾಯಿತು. ವಿವಾದ ಹೈಕೋರ್ಟ್ ಮೆಟ್ಟಿಲೇರಿತು. ಹೈಕೋರ್ಟ್ ಮಧ್ಯ ಪ್ರವೇಶಿಸಿದ ನಂತರ ಕಸ ವಿಂಗಡನೆ ಮಾಡಬೇಕೆಂದು ಬಿಬಿಎಂಪಿ ಅಧಿಸೂಚನೆ ಹೊರಡಿಸಿತು. ಆದರೆ ಅದಾಗಿ 6 ವರ್ಷಗಳು ಕಳೆದ ನಂತರವೂ ನಗರದ ಕಸ ವಿಲೇವಾರಿ ಸಮಸ್ಯೆ ಬಗೆಹರಿದಿಲ್ಲ. ನಗರದಲ್ಲಿ ಹಸಿ ಮತ್ತು ಒಣ ಕಸ ಪ್ರತ್ಯೇಕಪಡಿಸುವಿಕೆ ಇತ್ತೀಚೆಗೆ ವಿಫಲವಾಗಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಒಪ್ಪಿಕೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com