'ಜನತಾ ದರ್ಶನ'ಕ್ಕೆ ಸಿಎಂ ಅಧಿಕೃತ ಚಾಲನೆ: 1,056ಕ್ಕೂ ಹೆಚ್ಚು ಅರ್ಜಿಗಳ ಸ್ವೀಕಾರ

ಕಳೆದ 12 ವರ್ಷಗಳ ಹಿಂದೆ ನಡೆಸುತ್ತಿದ್ದ ಮಾದರಿಯ ವ್ಯವಸ್ಥಿತ ಜನತಾ ದರ್ಶನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಅಧಿಕೃತ ಚಾಲನೆ ನೀಡಿದರು...
'ಜನತಾ ದರ್ಶನ'ಕ್ಕೆ ಸಿಎಂ ಅಧಿಕೃತ ಚಾಲನೆ: 1,056ಕ್ಕೂ ಹೆಚ್ಚು ಅರ್ಜಿಗಳ ಸ್ವೀಕಾರ
'ಜನತಾ ದರ್ಶನ'ಕ್ಕೆ ಸಿಎಂ ಅಧಿಕೃತ ಚಾಲನೆ: 1,056ಕ್ಕೂ ಹೆಚ್ಚು ಅರ್ಜಿಗಳ ಸ್ವೀಕಾರ
ಬೆಂಗಳೂರು: ಕಳೆದ 12 ವರ್ಷಗಳ ಹಿಂದೆ ನಡೆಸುತ್ತಿದ್ದ ಮಾದರಿಯ ವ್ಯವಸ್ಥಿತ ಜನತಾ ದರ್ಶನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಅಧಿಕೃತ ಚಾಲನೆ ನೀಡಿದರು. 
ಶನಿವಾರ ಇಡೀ ದಿನ ಜನರ ಸಮಸ್ಯೆಗಳನ್ನು ಆಲಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿಕೊಟ್ಟರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಜನರು ತಮ್ಮ ದುಃಖ ದುಮ್ಮಾನ, ನೋವು, ಸಂಕಷ್ಟಗಳನ್ನು ಪರಿಪರಿಯಾಗಿ ವಿನಂತಿಸಿಕೊಂಡರು. 
ಅಹವಾಲುಗಳೊಂದಿಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಸಾರ್ವಜನಿಕರಿಗೆ ಸೂರು, ಆಸನ, ಕುಡಿಯುವ ನೀರು, ಉಪಾಹಾರದ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅಂಗವಿಕರಿಗೆ ಪ್ರತ್ಯೇಕ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. 
ಜನತಾ ದರ್ಶನದ ಮೇಲೆ ಸಾವಿರಾರು ಅರ್ಜಿಗಳನ್ನು ಸ್ವೀಕರಿಸಿದ ಕುಮಾರಸ್ವಾಮಿಯವರಿಗೆ ಉದ್ಯೋಗ ಮತ್ತು ಆನಾರೋಗ್ಯಕ್ಕೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚಾಗಿ ಸಲ್ಲಿಕೆಯಾಗಿದೆ ಎಂದು ತಿಳಿದುಬಂದಿದೆ. 
ಮುಖ್ಯಮಂತ್ರಿಗಳ ಜನತಾದರ್ಶನ ಮಧ್ಯಾಹ್ನ 11 ರ ಸುಮಾರಿಗೆ ಆರಂಭಗೊಂಡು ತಡರಾತ್ರಿವರೆಗೂ ನಡೆಯಿತು. ಈ ವೇಳೆ 1,056ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿಯಿತು. 
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಆರ್ ನಾಗಮಣಿ ಎಂಬುವವರು ಜನತಾ ದರ್ಶನದಲ್ಲಿ ಪಾಲ್ಕೊಂಡಿದ್ದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗಮಣಿಯವರು ಮುಖ್ಯಮಂತ್ರಿಗಳ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಕಡು ಬಡತನದಲ್ಲಿ ಜೀವನ ನಡೆಸುತ್ತಿರುವ ಅವರು, ಗರ್ಭಿಣಿಯಾಗಿದ್ದಾರೆ. ಆರೋಗ್ಯ ಸಮಸ್ಯೆಗಳಿರುವುದಿರಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಆಸ್ಪತ್ರೆಯು ಲಕ್ಷಾಂತರ ರೂಪಾಯಿಗಳಷ್ಟು ಚಿಕಿತ್ಸೆಗೆ ಹಣವನ್ನು ಪಡೆಯುತ್ತಿದೆ ಎಂದು ಹೇಳಿಕೊಂಡರು. ಮಹಿಳೆಯ ದುಃಖವನ್ನು ಆಲಿಸಿದ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಹಿಳೆಗೆ ರೂ.2 ಲಕ್ಷ ನೀಡಿದರು. 
ಇದಂತೆ 11 ವರ್ಷದ ಲೋಹಿತ್ ಎಂಬ ಬಾಲಕ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಕುಮಾರಸ್ವಾಮಿಯವರ ಬಳಿ ತನ್ನ ಅಳಲನ್ನು ತೋಡಿಕೊಂಡನು. ತಾಯಿಯೊಂದಿಗೆ ಬಂದಿದ್ದ ಲೋಹಿತ್'ನಿಗೆ ಕುಮಾರಸ್ವಾಮಿಯವರು ಸಮಾಧಾನ ಹೇಳಿದರು. ಅಲ್ಲದೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿ ಚಿಕಿತ್ಸೆಯ ಭರವಸೆಯನ್ನು ನೀಡಿ ರೂ.10,000 ಚೆಕ್ ನೀಡಿದರು. 
ಇದಲ್ಲದೆ ಹಲವು ಜಿಲ್ಲೆಗಳಿಂದ ಬಂದಿದ್ದ ರೈತರು ತಮಗೆ ಸಾಲ ಮನ್ನಾ ಯೋಜನೆಗಳು ತಲುಪುತ್ತಿಲ್ಲ ಎಂದು ಹೇಳಿ ಸಹಾಯ ಕೇಳಿದರು. ಎಲ್ಲಾ ಸಮಸ್ಯೆಗಳನ್ನು ಸಮಾಧಾನಕರ ರೀತಿಯಲ್ಲಿ ಆಲಿಸಿದ ಕುಮಾರಸ್ವಾಮಿಯವರು ಸಮಸ್ಯೆಗಳನ್ನು ಪರಿಹರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com